ಕಳೆದ ವರ್ಷ ನಮ್ಮ ಬಳಿ ಪಿಪಿಇ ಕಿಟ್, ಲಸಿಕೆ ಇರಲಿಲ್ಲ. ಈ ಹಿನ್ನಲೆ ಲಾಕ್ಡೌನ್ ಒಂದೇ ನಮಗೆ ಇದ್ದ ಮಾರ್ಗಾವಾಗಿತ್ತು. ಈಗ ನಮ್ಮ ಬಳಿ ಲಸಿಕೆ ಇದ್ದು, ಮತ್ತೊಮ್ಮೆ ದೇಶದಲ್ಲಿ ಲಾಕ್ಡೌನ್ ಮಾಡುವುದಿಲ್ಲ ಎಂಬ ಸುಳಿವು ನೀಡಿದರು.
ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಕಳವಳ ವ್ಯಕ್ತಪಡಿಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕೊರೋನಾ ಸೋಂಕು ದೃಢವಾದ ಹಿನ್ನಲೆ ಅವರು ಈ ಸಭೆಗೆ ಹಾಜರಾಗಿರಲಿಲ್ಲ.
ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ದೇಶದಲ್ಲಿ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಈ ಹಿನ್ನಲೆ ತುರ್ತು ಕ್ರಮ ಕೈಗೊಳ್ಳಬೇಕಿರುವುದು ಅತ್ಯಗತ್ಯ. ದೇಶದಲ್ಲಿ ಈಗಾಗಲೇ 9 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕೆಲಸವನ್ನು ಬೇಗ ಮುಗಿಸಬೇಕು ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿದೆ.
11 ರಾಜ್ಯದ ಸಿಎಂಗಳ ಜತೆ ಸಭೆಯಲ್ಲಿ ಮಾತನಾಡಿದ ಅವರು, ಇನ್ನು 2-3 ವಾರ ಕಠಿಣ ನಿಯಮ ಅಗತ್ಯ. ಕೆಲವು ರಾಜ್ಯಗಳಲ್ಲಿ ಸ್ಥಿತಿ ಚಿಂತಾಜನಕವಾಗಿದೆ. ಮೊದಲ ಅಲೆಗಿಂತಲೂ ಹೆಚ್ಚು ತೀವ್ರವಾಗಿದೆ. ಕೆಲ ರಾಜ್ಯಗಳು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ. ಯುದ್ಧೋಪಾದಿ ಕ್ರಮಕೈಗೊಳ್ಳುವ ಅಗತ್ಯವಿದೆ. ಮೊದಲ ಅಲೆಯ ದಯನೀಯ ಸ್ಥಿತಿಯಿಲ್ಲ. ಸವಲತ್ತು, ವ್ಯಾಕ್ಸಿನ್ ಕೂಡಾ ನಮಗೆ ಸಿಕ್ಕಿದೆ. ಮೊದಲ ಅನುಭವದ ಆಧಾರದಲ್ಲಿ ಕ್ರಮಕೈಗೊಳ್ಳಿ. ಮೈಕ್ರೋ ಕಂಟೈನ್ಮೆಂಟ್ ಜೋನ್ ಅಗತ್ಯವಿದೆ. ಕಂಟೈನ್ಮೆಂಟ್ ಜೋನ್ ಮೇಲೆ ಒತ್ತು ನೀಡಿ ಎಂದು ಸಲಹೆ ನೀಡಿದರು.
ನೈಟ್ ಕರ್ಫ್ಯೂ ಎಂಬ ಪದವನ್ನು ಬಳಸಬೇಡಿ. ನೈಟ್ ಕರ್ಫ್ಯೂ ಬದಲು ಕೊರೋನಾ ಕರ್ಫ್ಯೂ ಎನ್ನಿ. ಕೊರೋನಾ ಬಗ್ಗೆ ಜಾಗೃತಿ ಮೂಡಿಸಲಷ್ಟೇ ಕರ್ಫ್ಯೂ. ಕೊರೋನಾ ಪರೀಕ್ಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ. ಟೆಸ್ಟಿಂಗ್ ಪ್ರಮಾಣ ಇನ್ನಷ್ಟು ಹೆಚ್ಚಿಸಬೇಕು. ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಚಿಂತೆ ಬೇಡ. ಶೇ.70ರಷ್ಟು ಆರ್ಟಿಪಿಸಿಆರ್ ಪರೀಕ್ಷೆ ನಮ್ಮ ಗುರಿ. ಕಂಟೈನ್ಮೆಂಟ್ ಜೋನ್ಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಿ ಎಂದು ತಿಳಿಸಿದರು.
ಮತ್ತೊಮ್ಮೆ ಭಾರತ ಸವಾಲನ್ನು ಎದುರಿಸುತ್ತಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಅದನ್ನು ಎದುರಿಸುವ ಕುರಿತು ರಾಜ್ಯಗಳು ಸಲಹೆ ನೀಡಬೇಕು ಎಂದು ಮನವಿ ಮಾಡಿದರು. ಪ್ರಕರಣಗಳು ಹೆಚ್ಚಾಗುತ್ತಿದ್ದರು ಜನರು ಆರಾಮವಾಗಿದ್ದಾರೆ. ಜನರು ಈ ಬಗ್ಗೆ ಹೆಚ್ಚು ಕಾಳಜಿವಹಿಸದ ಪರಿಣಾಮ ಪ್ರಕರಣ ಹೆಚ್ಚುತ್ತಿದೆ. ಕಳೆದ ವರ್ಷ ನಮ್ಮ ಬಳಿ ಪಿಪಿಇ ಕಿಟ್, ಲಸಿಕೆ ಇರಲಿಲ್ಲ. ಈ ಹಿನ್ನಲೆ ಲಾಕ್ಡೌನ್ ಒಂದೇ ನಮಗೆ ಇದ್ದ ಮಾರ್ಗಾವಾಗಿತ್ತು. ಲಾಕ್ಡೌನ್ ಮೂಲಕ ಆರೋಗ್ಯ ಸೌಲಭ್ಯವನ್ನು ಹೆಚ್ಚಿಸಿಕೊಂಡೆವು. ಈಗ ನಮ್ಮ ಬಳಿ ಲಸಿಕೆ ಇದ್ದು, ಮತ್ತೊಮ್ಮೆ ದೇಶದಲ್ಲಿ ಲಾಕ್ಡೌನ್ ಮಾಡುವುದಿಲ್ಲ ಎಂಬ ಸುಳಿವು ನೀಡಿದರು.
ಈ ಹಿಂದೆ ಮೂರು ಹಂತದ ತಂತ್ರ ಪಠಿಸಿದ್ದ ಪ್ರಧಾನಿ ಈ ಬಾರಿ ಐದು ಹಂತದ ತಂತ್ರವನ್ನು ಅನುಸರಿಸುವಂತೆ ಸೂಚಿಸಿದರು. ಅದೆಂದರೆ ಪರೀಕ್ಷೆ, ಪತ್ತೆ ಹಚ್ಚುವಿಕೆ , ಚಿಕಿತ್ಸೆ, ಕೋವಿಡ್ ನಿಯಾಮವಳಿ ಪಾಲನೆ, ಲಸಿಕೆ. ಇವುಗಳನ್ನು ಅನುಸರಿಸುವ ಮೂಲಕ ಸೋಂಕು ತಡೆಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,26,789 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 59,258 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,29,28,574ಕ್ಕೆ ಏರಿಕೆ ಆಗಿದೆ. ಬುಧವಾರ ಒಂದೇ ದಿನ ಕೊರೋನಾಗೆ 685 ಜನರು ಬಲಿ ಆಗಿದ್ದಾರೆ. ಈವರೆಗೆ ಕೊರೋನಾ ರೋಗದಿಂದ ಸತ್ತವರ ಸಂಖ್ಯೆ 1,66,862ಕ್ಕೆ ಏರಿಕೆ ಆಗಿದೆ.