janadhvani

Kannada Online News Paper

ಖಾಸಗಿ ಕೋವಿಡ್ -19 ಆಸ್ಪತ್ರೆಯಲ್ಲಿ ಭಾರೀ ಬೆಂಕಿ ಅನಾಹುತ-ಮೃತರ ಸಂಖ್ಯೆ 10 ಕ್ಕೆ ಏರಿಕೆ

ಮುಂಬೈ,ಮಾ.26 : ಕಳೆದ ಮಧ್ಯರಾತ್ರಿ ಮುಂಬೈನ ಭಂಡಪ್ ಪ್ರದೇಶದ ಖಾಸಗಿ ಕೋವಿಡ್ -19 ಆಸ್ಪತ್ರೆಯಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದಲ್ಲಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದಾರೆ.

ಇಲ್ಲಿನ ಸನ್‌ರೈಸ್‌ ಆಸ್ಪತ್ರೆಯ ಡ್ರೀಮ್ಸ್‌ ಮಾಲ್‌ ಕಟ್ಟಡದಲ್ಲಿರುವ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವಿಗೀಡಾದವರ ಸಂಖ್ಯೆ ಹತ್ತಕ್ಕೆ ಏರಿದ್ದು, 70 ರೋಗಿಗಳನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.ಕೋವಿಡ್‌–19 ರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮಾಲ್‌ನ ಮೂರನೇ ಮಹಡಿಯಲ್ಲಿರುವ ಕೋವಿಡ್ ಚಿಕಿತ್ಸೆಗೆ ಮೀಸಲಾದ ಸನ್‌ರೈಸ್ ಆಸ್ಪತ್ರೆಯಲ್ಲಿ ಹೊಗೆ ಆವರಿಸುತ್ತಿದ್ದಂತೆ ಅನೇಕ ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಮಧ್ಯರಾತ್ರಿ ಸುಮಾರು 12.30 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ಪಡೆದ ತಕ್ಷಣವೇ ಸುಮಾರು 22 ಅಗ್ನಿಶಾಮಕ ವಾಹನಗಳು ಆಸ್ಪತ್ರೆಯಿರುವ ಮಾಲ್ ಗೆ ತಲುಪಿ ಬೆಂಕಿಯನ್ನು ನಂದಿಸಿವೆ.

ಅಗ್ನಿ ಅವಘಡ ಸಂಭವಿಸಿದಾಗ, ಈ ಕೇಂದ್ರದಲ್ಲಿ 76 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಬಹುತೇಕರು ಕೊರೊನಾ ಸೋಂಕಿಗೆ ಒಳಗಾಗಿದ್ದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

error: Content is protected !! Not allowed copy content from janadhvani.com