ಬೆಂಗಳೂರು; ಕೊರೋನಾ ಮಹಾಸಂಕಷ್ಟದ ನಂತರ ಶಾಲೆಗಳು ಈಗೀಗ ಆರಂಭವಾಗಿವೆ. ಇದರ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ದಿನಾಂಕ ನಿಗದಿ ಮಾಡಿದೆ. ಈ ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ಇಂದು 2021ರ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
2021 ಜೂನ್ 14ರಿಂದ ಜೂನ್ 25ರವರೆಗೂ ಹತ್ತನೇ ತರಗತಿ ಪರೀಕ್ಷೆಗಳು ನಡೆಯಲಿವೆ. ಕಳೆದ ವರ್ಷ 2020 ಜೂನ್ 25ರಂದು ಪರೀಕ್ಷೆ ಪ್ರಾರಂಭ ಮಾಡಲಾಗಿತ್ತು. ಈ ವರ್ಷ ಜೂನ್ 25ಕ್ಕೆ ಪರೀಕ್ಷೆಗಳು ಕೊನೆಯಾಗಲಿವೆ. ಕೋರ್ ಸಬ್ಜೆಕ್ಟ್ ಗಳಿಗೆ 3 ತಾಸು ಕಾಲಾವಧಿ ನೀಡಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಗಳಿಗೆ 2.45 ತಾಸು ಬರೆಯಲು ಹಾಗೂ 15 ನಿಮಿಷ ಉತ್ತರ ಪತ್ರಿಕೆ ಪರಿಶೀಲನೆ ಸಮಯ ನಿಗದಿ ಮಾಡಲಾಗಿದೆ. ಪರೀಕ್ಷೆ ದಿನಾಂಕ ಸಂಬಂಧ ಆಕ್ಷೇಪಣೆ ಸಲ್ಲಿಸಲು ಜನವರಿ 28ರಿಂದ ಫೆ. 26ರವರೆಗೆ ಸಮಯ ನೀಡಲಾಗಿದೆ. ನಿರ್ದೇಶಕರು, ಪರೀಕ್ಷಾ ವಿಭಾಗ, ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಕಚೇರಿಗೆ ಪತ್ರ ಬರೆದು ಕಳಿಸಬಹುದು ಎಂದು ತಿಳಿಸಿದರು.
ಈವರೆಗೆ ಯಾವುದೇ ಶಾಲೆಯಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ ಸೋಂಕು ಹರಡುವಿಕೆ ಬಗ್ಗೆ ವರದಿಯಾಗಿಲ್ಲ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾಗಿದೆ. ಆನ್ಲೈನ್ಗಿಂತ ಆಫ್ ಲೈನ್ ತರಗತಿಗಳಿಗೆ ಹೋಗುವ ಇಂಗಿತ ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ. ಪೋಷಕರೂ ಸಹ ಎಲ್ಲ ತರಗತಿಗಳನ್ನೂ ಪ್ರಾರಂಭ ಮಾಡಿ ಎನ್ನುತ್ತಿದ್ದಾರೆ. ವಿದ್ಯಾಗಮ ಸದ್ಯ ದಿನ ಬಿಟ್ಟು ದಿನ ತರಗತಿಗಳು ನಡೆಯುತ್ತಿವೆ. ಹೀಗಾಗಿ ಹಾಜರಾತಿ ಕಡಿಮೆ ಇದೆ ಎಂದು ಹೇಳಿದರು.