janadhvani

Kannada Online News Paper

ಸೌದಿ: ಖಾಸಗಿ ವಲಯದಲ್ಲೂ ವಾರದಲ್ಲಿ ಎರಡು ದಿನಗಳ ರಜೆ

ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯದಲ್ಲಿ ವಾರದಲ್ಲಿ ಎರಡು ದಿನಗಳ ರಜಾದಿನವನ್ನು ಜಾರಿಗೆ ತರಲು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಮುಂದಾಗಿದೆ ಎಂದು ವರದಿಯಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ದೇಶದ ಕಾರ್ಮಿಕ ಕಾನೂನಿಗೆ ಪ್ರಸ್ತಾವಿತ ತಿದ್ದುಪಡಿಗಳಲ್ಲಿ ಎರಡು ದಿನಗಳ ರಜೆಯನ್ನು ಒಳಪಡಿಸಲಾಗಿದೆ.

ಎರಡು ದಿನಗಳ ರಜೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವಾಲಯ ಈ ಹಿಂದೆ ಕೆಲವು ಕ್ರಮಗಳನ್ನು ಕೈಗೊಂಡಿತ್ತು ಆದರೆ ಖಾಸಗಿ ವಲಯದ ವಿರೋಧದಿಂದಾಗಿ ಈ ನಿರ್ಧಾರವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿರಲಿಲ್ಲ.ಮುಖ್ಯ ಅಡಚಣೆಯೆಂದರೆ ಅಂತಹ ಪ್ರಸ್ತಾಪವನ್ನು ಸ್ಥಳೀಯರಿಗೆ ಮಾತ್ರ ಜಾರಿಗೆ ತರಲು ಸಾಧ್ಯವಿಲ್ಲ ಮತ್ತು 70 ಲಕ್ಷ ವಿದೇಶಿಯರು ಕೂಡ ಎರಡು ದಿನಗಳ ರಜೆ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ. ಕಾನೂನು ಪ್ರಕಾರ ಎರಡು ದಿನಗಳ ರಜೆ ಅನುಮತಿಸಿದ್ದಲ್ಲಿ, ವಾರದಲ್ಲಿ ಆರು ಅಥವಾ ಏಳು ದಿನ ಕೆಲಸ ಮಾಡಬೇಕಾದ ಕಾರ್ಮಿಕರಿಗೆ ಹೆಚ್ಚಿನ ಮೊತ್ತದ ಹೆಚ್ಚುವರಿ ವೇತನವನ್ನು ಪಾವತಿಸಬೇಕಾಗುತ್ತದೆ ಎಂಬ ನೆಲೆಯಲ್ಲಿ ಖಾಸಗಿ ವಲಯವು ಇದನ್ನು ವಿರೋಧಿಸಿತ್ತು.

ಕಾರ್ಮಿಕ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಯ ಕರಡನ್ನು ಸಚಿವಾಲಯ ಪ್ರಕಟಿಸಿದ್ದು, ಇದರಲ್ಲಿ ಎರಡು ದಿನಗಳ ರಜೆಯನ್ನು ಪ್ರಸ್ತಾಪಿಸಲಾಗಿದೆ. ಕಾರ್ಮಿಕರು, ಉದ್ಯೋಗದಾತರು, ಇತರ ತಜ್ಞರು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.

error: Content is protected !! Not allowed copy content from janadhvani.com