ಮಂಗಳೂರು: ನೂರು ರುಪಾಯಿ ಮುಖ ಬೆಲೆಯ ಹಳೇಯ ನೋಟುಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ ಎಂದು ಆರ್‌ಬಿಐ ಸಹಾಯಕ ಮಹಾಪ್ರಬಂಧಕ ಬಿ.ಎಂ ಮಹೇಶ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಬ್ಯಾಂಕಿಂಗ್ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನೂರು ರುಪಾಯಿ ಮೌಲ್ಯದ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿ ಇರುವಂತೆ ಮಾಡಲು ಈ ನಿರ್ಧಾರ ತಾಳಲಾಗಿದೆ. ಹಳೆಯ ಮಾದರಿಯ ನೋಟುಗಳಲ್ಲಿ ಖೋಟಾ ನೋಟಿನ ಪ್ರಮಾಣ ಹೆಚ್ಚಾಗಿದ್ದರಿಂದ ಅದನ್ನು ಹಿಂಪಡೆಯಲಾಗುತ್ತಿದೆ. ಮಾರ್ಚ್ ಅಂತ್ಯದ ವೇಳೆ ಎಲ್ಲಾ ಹಳೇಯ ನೋಟುಗಳನ್ನು ಹಿಂಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಒಂದೇ ವರ್ಷದಲ್ಲಿ ಚಲಾವಣೆಯಲ್ಲಿರುವ ನಗದಿನಲ್ಲಿ ದಾಖಲೆಯ 5 ಲಕ್ಷ ಕೋಟಿ ರೂ. ಏರಿಕೆ
ಕಳೆದ ಆರು ವರ್ಷಗಳಿಂದ ಈ ನೋಟುಗಳನ್ನು ಮುದ್ರಣ ಮಾಡಲಾಗುತ್ತಿಲ್ಲ. ಸದ್ಯ ಈ ಹಿಂದೆಯೇ ಮುದ್ರಣವಾಗಿರುವ ನೋಟುಗಳು ಚಲಾವಣೆಯಲ್ಲಿದ್ದು ಅದನ್ನು ಹಿಂಪಡೆಯುವುದು ಆರ್‌ಬಿಐನ ಉದ್ದೇಶವಾಗಿದೆ. ಈಗಾಗಲೇ ಹಂತ ಹಂತವಾಗಿ ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ ಎಂದಿದ್ದಾರೆ.
ಇದೇ ವೇಳೆ ಹಳೇಯ ನೋಟು ವಾಪಸ್ ಪಡೆಯುವುದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲ. ಇದು ನೋಟ್ ಬ್ಯಾನ್ ಅಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯ ಪಡಬೇಕಾಗಿ ಇಲ್ಲ ಎಂದು ಅವರು ಹೇಳಿದರು. ಅಲ್ಲದೇ ಹೊಸ ಸ್ವಚ್ಛ ನೋಟುಗಳು ಜನರ ಕೈಗೆ ಸಿಗಬೇಕು ಎಂಬುದು ಆರ್‌ಬಿಐನ ಉದ್ದೇಶ. ಇದು ಯಾವುದೇ ಥರದ ನೋಟು ಅಮಾನ್ಯೀಕರಣ ಅಲ್ಲ ಎಂದು ಹೇಳಿದರು.
ಇದೇ ವೇಳೆ ಹತ್ತು ರುಪಾಯಿ ನಾಣ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಕಲಿ ಎನ್ನುವ ಭೀತಿಯಿಂದ ಜನರು ಹೆಚ್ಚಾಗಿ ಹತ್ತು ರು. ನಾಣ್ಯಗಳನ್ನು ಹೆಚ್ಚಾಗಿ ಬಳಸುತ್ತಿಲ್ಲ. ಈ ನಾಣ್ಯವನ್ನು ನಕಲು ಮಾಡಲು ಸಾದ್ಯವಿಲ್ಲ ಎಂದು ಜನರಿಗೆ ತಿಳಿಸಬೇಕು. ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಹತ್ತು ರುಪಾಯಿ ನಾಣ್ಯಗಳನ್ನು ಸ್ವೀಕರಿಸಬೇಕು ಎಂದು ಅವರು ಸಲಹೆ ನೀಡಿದರು.