ಬೆಂಗಳೂರು,ಜ.11- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನೇ ಪ್ರಮುಖ ಕಾರಣಕರ್ತ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇ ನಾನು. ಇದರಿಂದಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು. ನಮಗೆ ಮುಖ್ಯಮಂತ್ರಿಗಳ ಮೇಲೆ ನಂಬಿಕೆ ಇರುವುದರಿಂದ ಸಂಪುಟದಲ್ಲಿ ಸಚಿವನಾಗಿ ಮುಂದುವರೆಯುತ್ತೇನೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಸಿಎಂ ನನ್ನನ್ನು ಸಂಪುಟದಿಂದ ಕೈ ಬಿಡುವುದಿಲ್ಲ. ಹಾಗೊಂದು ವೇಳೆ ಅಂಥ ಸಂದರ್ಭ ಬಂದರೆ ಖುದ್ದು ನಾನೇ ಸಿಎಂ ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ. ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡುವುದಿಲ್ಲ. ನನಗೆ ಯಡಿಯೂರಪ್ಪ ಅವರ ಮೇಲೆ ಅಪಾರ ನಂಬಿಕೆಯಿದೆ ಎಂದು ತಿಳಿಸಿದರು.
ಹೈಕಮಾಂಡ್ ಏನು ಹೇಳಿದೆ ಎಂಬುದು ನನಗೆ ಗೊತ್ತಿಲ್ಲ. ಈಗಲೂ ಕೂಡ ಮಂತ್ರಿಯಾಗಿಯೇ ಮುಂದುವರೆಯುತ್ತಿದ್ದೇನೆ. ಯಡಿಯೂರಪ್ಪನವರು ಮೂರುವರೆ ವರ್ಷ ಮಂತ್ರಿಯಾಗಿರುತ್ತೀಯ ಎಂದು ಹೇಳಿದ್ದಾರೆ. ಕಷ್ಟದಲ್ಲಿ ನಾನು ಬಿಜೆಪಿಯನ್ನು ಕೈಹಿಡಿದಿದ್ದೇನೆ. ಆದರೆ ನನಗೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಶಾಕ್ ಆಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಕಚೇರಿಯಿಂದ ಈವರೆಗೂ ನನಗೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ. ಎಲ್ಲವೂ ಊಹಾಪೋಹಗಳ ಮೇಲೆ ನಡೆಯುತ್ತಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಧೈರ್ಯ ಯಾರಿಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಚಿವನಾಗಿದ್ದೆ. ಆಮೇಲೆ ಕೆಲವರು ಇಲ್ಲಿಗೆ ಬಂದಿದ್ದಾರೆ ಎಂದರು.
ನಾನು ರಾಜೀನಾಮೆ ಕೊಟ್ಟಾಗ ಯಾರ್ಯಾರು ಏನೇನು ಟೀಕೆ ಮಾಡಿದ್ದಾರೆ ಎಂಬುದು ಗೊತ್ತು. ಸರ್ಕಾರ ರಚನೆಗೆ ನಾನೇ ಕಾರಣನಾಗಿರುವುದರಿಂದ ನನ್ನನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಏಕೈಕ ನಾಯಕ. ಹೈಕಮಾಂಡ್ ಏನು ತೀರ್ಮಾನ ಕೈಗೊಂಡಿದೆ ಎಂಬುದರ ಬಗ್ಗೆ ನನ್ನ ಬಳಿ ಮಾಹಿತಿ ಇಲ್ಲ ಎಂದು ಹೇಳಿದರು