ಕುವೈಟ್ ಸಿಟಿ: ಪದವಿ ಪಡೆಯದ, 60 ವರ್ಷಕ್ಕಿಂತ ಮೇಲ್ಪಟ್ಟವರ ವೀಸಾಗಳನ್ನು ನವೀಕರಿಸದಿರುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಕುವೈತ್ ಮಾನವಶಕ್ತಿ ಪ್ರಾಧಿಕಾರ ಹೇಳಿದೆ. ಜನವರಿ 1 ರಿಂದ ಜಾರಿಗೆ ಬಂದ ಈ ಕಾನೂನು ಪ್ರಕಾರ,ಪ್ರೌಢ ಶಾಲಾ ಡಿಪ್ಲೊಮಾ ಮತ್ತು ಅದಕ್ಕಿಂತ ಕೆಳಗಿನ ಶೈಕ್ಷಣಿಕ ಅರ್ಹತೆ ಹೊಂದಿದ್ದು, 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಿಗೆ ವೀಸಾ ನವೀಕರಿಸಲಾಗುವುದಿಲ್ಲ ಎಂದು ಕುವೈತ್ ಮಾನವಶಕ್ತಿ ಪ್ರಾಧಿಕಾರ ಒತ್ತಿ ಹೇಳಿದೆ.
ಏತನ್ಮಧ್ಯೆ ,ನೋಂದಣಿಗಾಗಿ ಹೊಸ ಆನ್‌ಲೈನ್ ವ್ಯವಸ್ಥೆಯನ್ನು ಜನವರಿ 12 ರಿಂದ ಪ್ರಾರಂಭಿಸಲಾಗುವುದು ಮತ್ತು ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಅಧಿಕೃತ ಪ್ರತಿನಿಧಿಗಳು ಜನವರಿ 12 ರ ಮುಂಚಿತವಾಗಿ ತಮ್ಮ ಸಹಿಯನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.