ವಾಷಿಂಗ್ಟನ್ : ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ ಶಾಶ್ವತವಾಗಿ ರದ್ದುಗೊಳಿಸಿದೆ.
ವಾಷಿಂಗ್ಟನ್ ಡಿಸಿಯಲ್ಲಿನ ಕ್ಯಾಪಿಟಲ್ ಹಿಲ್ನಲ್ಲಿ ಎರಡು ದಿನಗಳ ಹಿಂದೆ ನಡೆದ ಟ್ರಂಪ್ ಬೆಂಬಲಿಗರ ಹಿಂಸಾಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಟ್ವಿಟರ್ ಶಾಶ್ವತವಾಗಿ ಟ್ರಂಪ್ ಖಾತೆಯನ್ನು ತೆಗೆದುಹಾಕಿದೆ.
ಪೂರ್ಣ ಹತೋಟಿಗೆ ಬಂದಿರುವ ಹಿಂಸಾಚಾರವನ್ನು ಟ್ರಂಪ್ ಅವರು ತಮ್ಮ ಟ್ವೀಟ್ ಗಳಿಂದ ಮತ್ತಷ್ಟು ಪ್ರಚೋದಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಟ್ರಂಪ್ ಖಾತೆಯನ್ನು ಶಾಶ್ವತವಾಗಿ ತೆಗೆದು ಹಾಕಲಾಗಿದೆ ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ.
ಕಳೆದ ಬುಧವಾರ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ ಬಳಿಕ ಟ್ರಂಪ್ ಖಾತೆಯನ್ನು 12 ತಾಸು ಅಮಾನತಿನಲ್ಲಿಡಲಾಗಿತ್ತು.
ಈ ನಡುವೆ ಜೋ ಬೈಡೆನ್ ಅವರ ಗೆಲುವನ್ನು ಪ್ರಮಾಣೀಕರಿಸಲಾಗಿದ್ದು, ಜನವರಿ 20ರಂದು ಬೈಡೆನ್ ನೂತನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. ತಾನು ಈ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಆದರೂ ಅಧಿಕಾರ ಹಸ್ತಾಂತರ ಮಾಡುತ್ತೇನೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.