ಮಂಗಳೂರು: ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಸಂಭ್ರಮಾಚರಣೆಯ ವೇಳೆ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ್ದಾರೆಂಬ ವದಂತಿಯ ಆಧಾರದಲ್ಲಿ ಕೆಲವು ಯುವಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಈ ಬಗ್ಗೆ ಯಾವುದೇ ಕೂಲಂಕಷ ತನಿಖೆ ನಡೆಸದೆ, ಪ್ರಕರಣದ ಸತ್ಯಾಸತ್ಯತೆ ಅರಿಯದೆ, ಪ್ರಥಮ ವರ್ತಮಾನ ವರದಿ ದಾಖಲಿಸಿ ಅಮಾಯಕ ಯುವಕರನ್ನು ಬಂಧಿಸಿರುವುದನ್ನು ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ.
ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳೂ ನಡೆಯುತ್ತಿದೆ. ಘಟನೆಯ ಸತ್ಯಾಸತ್ಯತೆ ಬಗ್ಗೆ ಪೋಲೀಸರು ಸಾರ್ವಜನಿಕರಿಗೆ ನೈಜ ಮಾಹಿತಿ ತಿಳಿಸದೇ ಇದ್ದದ್ದು ವ್ಯಾಪಕ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ.ಪಾಕಿಸ್ತಾನಕ್ಕೆ ಝಿಂದಾಬಾದ್ ಕೂಗಿದ್ದೇ ಆಗಿದ್ದಲ್ಲಿ ಅದು ಅತ್ಯಂತ ಖಂಡನೀಯವಾಗಿದೆ. ಅಂತವರನ್ನು ಕಾನೂನಿನ ಪ್ರಕಾರ ಶಿಕ್ಷಿಸಲೇ ಬೇಕು.
ಆದರೆ, ಉಜಿರೆಯಲ್ಲಿ ಪಾಕಿಸ್ತಾನಕ್ಕೆ ಝಿಂದಾಬಾದ್ ಘೋಷಣೆ ಮೊಳಗಿಸಿದ್ದಾರೆಂದು ಹೇಳಲಾಗುವ ಒರ್ಜಿನಲ್(ಎಡಿಟ್ ಮಾಡದ) ವೀಡೀಯೋ ಕ್ಲಿಪನ್ನು ಪೋಲೀಸರು ಸಾರ್ವಜನಿಕರ ಸಂದೇಹ ನಿವಾರಣೆಯ ಅಗತ್ಯಕ್ಕಾಗಿ ಪೂರೈಸಬೇಕಾಗಿದೆ. ಇಂತಹಾ ಸುಳ್ಳು ವದಂತಿಗಳನ್ನು ಸೃಷ್ಟಿಸಿ ದೇಶದಲ್ಲಿ ಕ್ಷೋಭೆ ಹರಡುವ ಪೂರ್ವಾಗ್ರಹ ಪೀಡಿತ ಮಾದ್ಯಮಗಳ ಪಾತ್ರ ಅಪಾರವಾಗಿದೆ.
ಅದೂ ಅಲ್ಲದೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿರುವ ಕಾರ್ಯಕರ್ತರಿಗೆ ದೌರ್ಜನ್ಯ ಎಸಗಲಾಗಿದೆ.ಇನ್ನು ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಅಂತವರನ್ನು ಸಮಾಜವೂ ಬಹಿಷ್ಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಿಷ್ಪಕ್ಷ ತನಿಖೆ ನಡೆಸಬೇಕೆಂದು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ.
ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ
ಮುಸ್ಲಿಮ್ ಒಕ್ಕೂಟ.