ಲಕ್ನೋ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ. ಮಂದಿರ ನಿರ್ಮಾಣಕ್ಕಾಗಿ ಅಡಿಪಾಯ ಹಾಕುವುದಕ್ಕೆ ಗುರುತಿಸಲಾಗಿರುವ ಪ್ರದೇಶದ ಕೆಳಭಾಗದಲ್ಲಿ ಸರಯೂ ನದಿ ತೊರೆ ಇದ್ದು, ಯೋಜನಾ ಸಾಧ್ಯತೆಗೆ ಅಡ್ಡಿ ಉಂಟಾಗಿದೆ.
ಅಡಿಪಾಯ ಸ್ತಂಭಗಳ ಮೇಲೆ ಸುಮಾರು 700 ಟನ್ಗಳಷ್ಟು ಭಾರ ಇಟ್ಟಾಗ ಸ್ತಂಭ ಸುಮಾರು 4 ಇಂಚಿನಷ್ಟು ಕುಸಿದಿದೆ. ಅಲ್ಲದೆ ಸ್ತಂಭಗಳಲ್ಲಿ ಬಿರುಕು ಬಿಟ್ಟ ಸೂಚನೆ ಕಂಡುಬಂದಿದೆ. ಈ ಪ್ರದೇಶ ಭೂಕಂಪ ವಲಯದಲ್ಲಿರುವುದರಿಂದ ರಚನಾತ್ಮಕವಾಗಿ ಸುರಕ್ಷಿತ ಮಾದರಿಯನ್ನು ರೂಪಿಸುವ ನಿರ್ಧಾರಕ್ಕೆ ಬರಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದೇವಾಲಯ ನಿರ್ಮಾಣದ ಸಮಿತಿಯ ಅಧ್ಯಕ್ಷರಾಗಿರುವ ನೃಪೇಂದ್ರ ಮಿಶ್ರಾ ಈ ಸಂಬಂಧ ಸಭೆ ನಡೆಸಿದ್ದಾರೆ. ದೇವಾಲಯ ನಿರ್ಮಾಣಕ್ಕಾಗಿ ಈಗ ಸಿದ್ಧವಾಗಿರುವ ಅಡಿಪಾಯದ ಮಾದರಿ ಕಾರ್ಯಸಾಧುವಲ್ಲ ಎಂಬುದು ಸಭೆಯಲ್ಲಿ ಸ್ಪಷ್ಟವಾಗಿದ್ದು ಬಲಿಷ್ಠ ಅಡಿಪಾಯಕ್ಕಾಗಿ ಬೇರೆಯ ಮಾದರಿಯನ್ನು ಸೂಚಿಸುವಂತೆ ಐಐಟಿಗಳಿಗೆ ಮನವಿ ಮಾಡಲಾಗಿದೆ.