ಅಬುಧಾಬಿ: ನಗರದಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಅನುಮತಿ.ಜನವರಿ 2 ರಂದು ಟೋಲ್ ವ್ಯವಸ್ಥೆಯನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಕ್ರಿಯಗೊಳಿಸುವ ಗುರಿ ಹೊಂದಿದೆ. ಖಾಸಗಿ ವಾಹನಗಳನ್ನು ಬಸ್ ಚೆಕ್‌ಪಾಯಿಂಟ್ ಗಳಲ್ಲಿ ವಾಹನ ನಿಲುಗಡೆ ಮಾಡಿದ ನಂತರವೇ ಉಚಿತ ಬಸ್ ಪ್ರಯಾಣವನ್ನು ಪಡೆಯಬಹುದು.
ಖಾಸಗಿ ವಾಹನ ಬಳಕೆದಾರರಿಗೆ ನಗರಕ್ಕೆ ಮತ್ತು ಹೊರಗೆ ಟೋಲ್ ಪಾವತಿಸಿ ಸಂಚರಿಸುವುದನ್ನು ತಪ್ಪಿಸಲು ಇದು ಅವಕಾಶವನ್ನು ನೀಡುತ್ತದೆ ಎಂದು ಸಮಗ್ರ ಸಾರಿಗೆ ಕೇಂದ್ರ ಹೇಳಿದೆ.ಇದಕ್ಕಾಗಿ ಮುಹಮ್ಮದ್ ಬಿನ್ ಝಾಯಿದ್ ಸಿಟಿ ಮತ್ತು ಶಹಾಮದಲ್ಲಿ ತಲಾ 500 ಪಾರ್ಕಿಂಗ್ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ.
ಪ್ರತಿದಿನ ನಗರಕ್ಕೆ ಪ್ರಯಾಣಿಸುವವರು ಸುಂಕವನ್ನು ತಪ್ಪಿಸಲು ಈ ಸ್ಥಳಗಳಿಂದ ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಸಬಹುದು. ‘ಪಾರ್ಕ್ ಎಂಡ್ ರೈಡ್’ ಎಂದು ಕರೆಯಲ್ಪಡುವ ಈ ಯೋಜನೆಯು ದಿನಕ್ಕೆ 104 ಮತ್ತು 411 ಎಂಬ ಎರಡು ಉಚಿತ ಸೇವೆಗಳನ್ನು ಒದಗಿಸುತ್ತದೆ.
ಶನಿವಾರದಿಂದ ಗುರುವಾರದವರೆಗೆ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಸೇವೆ ಲಭ್ಯವಿದೆ. ಬೆಳಿಗ್ಗೆ ಆರು ರಿಂದ ಒಂಬತ್ತು ಮತ್ತು ಸಂಜೆ ನಾಲ್ಕು ರಿಂದ ಒಂಬತ್ತು ವರೆಗೆ ಪ್ರತೀ 20 ನಿಮಿಷಗಳಲ್ಲಿ ಈ ಸೇವೆ ಲಭ್ಯವಿರುತ್ತದೆ.ಇತರ ಸಮಯಗಳಲ್ಲಿ ಪ್ರತೀ 60 ನಿಮಿಷಗಳಲ್ಲಿ ಸೇವೆ ಲಭ್ಯವಿರುತ್ತದೆ. ಸಾಮಾಜಿಕ ಅಂತರ ಸೇರಿದಂತೆ ಷರತ್ತುಗಳನ್ನೊಳಗೊಂಡ 24 ಆಸನಗಳ ಬಸ್‌ನಿಂದ ಈ ಸೇವೆಯನ್ನು ಒದಗಿಸಲಾಗುತ್ತದೆ.
ಈ ಸೇವೆಗಾಗಿ ವಿಶೇಷ ಸೇವಾ ಕಾರ್ಡ್ ಅಗತ್ಯವಿದೆ. ಖಾಸಗಿ ವಾಹನದ ಚಾಲಕ ಸೇರಿದಂತೆ ಮೂರು ಜನರಿಗೆ ಪಾರ್ಕ್ ಎಂಡ್ ರೈಡ್ ಸೇವಾ ಕಾರ್ಡ್ ಸುಲಭವಾಗಿ ಲಭಿಸಲಿದೆ. ಈ ಕಾರ್ಡ್ ಒಂದು ದಿನಕ್ಕೆ ಮಾತ್ರ ಮಾನ್ಯವಾಗಿರುತ್ತದೆ.ದಿನದಲ್ಲಿ ಎಷ್ಟು ಬಾರಿ ಬೇಕಾದರೂ ಕಾರ್ಡ್ ಬಳಸಬಹುದು. ಕಾರ್ಡ್‌ಗಳನ್ನು ಬಸ್‌ಗಳಲ್ಲಿ ಮಾರಾಟ ಮಾಡಲಾಗುವುದಿಲ್ಲ ಮತ್ತು ಕಾರ್ಡ್ ಇಲ್ಲದೆ ಪ್ರಯಾಣಿಸಿದರೆ 200 ದಿರ್ಹಮ್ ದಂಡ ವಿಧಿಸಲಾಗುತ್ತದೆ.
ಬಸ್ ಮಾರ್ಗ ಹೀಗಿದೆ
ಸೇವಾ ಸಂಖ್ಯೆ 104: ಮುಹಮ್ಮದ್ ಬಿನ್ ಝಾಯಿದ್ ಸಿಟಿ, ಅಲ್ ಹುವೈಂನಿಂದ ಹೊರಡುವ ಬಸ್ ಅಬುಧಾಬಿಯ ಮುಖ್ಯ ಬಸ್ ಟರ್ಮಿನಲ್, ಇತ್ತಿಸಾಲಾತ್ ಬಿಲ್ಡಿಂಗ್, ಕಸ್ರ್ ಅಲ್ ಹೊಸನ್, ಶೈಖ್ ರಾಶಿದ್ ಬಿನ್ ಝಾಯಿದ್ ಸ್ಟ್ರೀಟ್ ಮತ್ತು ಖಲೀಫಾ ಸ್ಟ್ರೀಟ್ ಮೂಲಕ 50 ನಿಮಿಷಗಳಲ್ಲಿ ಸಂಚಿರಿಸಲಿದೆ.
ಸೇವಾ ಸಂಖ್ಯೆ 411: ಶಹಾಮಾದಿಂದ ಆರಂಭಿಸಿ ಅಬುಧಾಬಿ ಮುಖ್ಯ ಬಸ್ ಟರ್ಮಿನಲ್, ಅಲ್ ದಾನಾದ ಮರಿಯಮ್ ಬಿನ್ ಝಾಯಿದ್ ಮಸೀದಿ, ಅಬುಧಾಬಿ ಕೇಂದ್ರ ಅಂಚೆ ಕಚೇರಿ, ಅಲ್ ದಾನಾದ ಶೈಖ್ ಖಲೀಫಾ ಮತ್ತು ಸುಲ್ತಾನ್ ಬಿನ್ ಝಾಯಿದ್ ಸ್ಟ್ರೀಟ್‌ಗಳಿಂದಾಗಿ 50 ನಿಮಿಷಗಳಲ್ಲಿ ಸಂಚರಿಸಲಿದೆ.