ನವದೆಹಲಿ,ಜ.1: ಅತ್ಯಾಚಾರಿಗಳ ರಾಜಧಾನಿ ಎಂದು ನೆಟ್ಟಿಗರು ಆರೋಪಿಸುತ್ತಿರುವ ಯೋಗಿ ಆದಿತ್ಯನಾಥ್ ಸಾಮ್ರಾಜ್ಯವು ಒಂದಿಲ್ಲೊಂದು ಪ್ರಕರಣದಲ್ಲಿ ಸುದ್ದಿಯಾಗುತ್ತಲೇ ಇದೆ. ಅಸ್ತಿತ್ವದಲ್ಲೇ ಇಲ್ಲದ ಅಪರಾಧವೊಂದನ್ನು ‘ಲವ್ ಜಿಹಾದ್’ ಎಂಬ ಹೆಸರಲ್ಲಿ ಸೃಷ್ಟಿಸಿ ಅದರ ವಿರುದ್ಥ ಕಾನೂನು ಜಾರಿ ಮಾಡಿದ ಹೆಗ್ಗಳಿಕೆ ಕೂಡ ಯೋಗಿಗೆ ಸಲ್ಲುತ್ತದೆ.
ಇದೀಗ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿರುವ ಶಿಕಾರ್ಪುರ್ ನಗರದಲ್ಲಿ 14 ವರ್ಷದ SSLC ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಮೂರು ಸುತ್ತಿನ ಗುಂಡು ಹಾರಿಸಿ, Murder ಮಾಡಿರುವ ಘಟನೆ ನಡೆದಿದೆ. ತರಗತಿಯೊಳಗೆ ಇಬ್ಬರ ನಡುವೆ ನಡೆದ ಸಣ್ಣ ಗಲಾಟೆಯಿಂದ ಈ ಹತ್ಯೆ ನಡೆದಿದೆ ಎನ್ನಲಾಗಿದೆ.
ಶಿಕರ್ಪುರದ ಸೂರಜ್ ಭಾನ್ ಸರಸ್ವತಿ ಅಂತರ್ ಕಾಲೇಜಿನ ಎಸ್ಎಸ್ಎಲ್ಸಿ ವಿದ್ಯಾರ್ಥಿ ತನ್ನ ಜಾಗದಲ್ಲಿ ಕುಳಿತಿದ್ದ ಇನ್ನೋರ್ವ ವಿದ್ಯಾರ್ಥಿಯನ್ನು ಹಿಂದಿನ ಬೆಂಚಿಗೆ ಹೋಗಿ ಕೂರುವಂತೆ ಗಲಾಟೆ ಮಾಡಿದ್ದ. ಇದಕ್ಕೆ ಬುಧವಾರ ಇಬ್ಬರ ನಡುವೆ ವಾದ ನಡೆದಿತ್ತು. ತನ್ನ ಸೀಟಿನಲ್ಲಿ ಕುಳಿತಿದ್ದ ಸಹಪಾಠಿಯ ವರ್ತನೆಯಿಂದ ಕೋಪಗೊಂಡಿದ್ದ ಆ ವಿದ್ಯಾರ್ಥಿ ಗುರುವಾರ ಶಾಲೆಗೆ ಬರುವಾಗ ತನ್ನ ಸ್ಕೂಲ್ ಬ್ಯಾಗ್ನಲ್ಲಿ ಬಚ್ಚಿಟ್ಟು ಪಿಸ್ತೂಲನ್ನು ತಂದಿದ್ದಾನೆ.
ಎರಡು ತರಗತಿಗಳು ನಡೆದ ಬಳಿಕ ಬ್ಯಾಗ್ನಿಂದ ಪಿಸ್ತೂಲ್ ಹೊರತೆಗೆದು ತನ್ನ ಸಹಪಾಠಿಯ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದ. ತಕ್ಷಣ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಶಾಲೆಯಲ್ಲಿ ಗುಂಡಿನ ಶಬ್ದ ಮೊಳಗುತ್ತಿದ್ದಂತೆ ವಿದ್ಯಾರ್ಥಿಗಳು, ಶಿಕ್ಷಕರು ಗಾಬರಿಯಾಗಿ ಹೊರಗೆ ಓಡಿಬಂದಿದ್ದರು. ಗುಂಡು ಹಾರಿಸಿದ ವಿದ್ಯಾರ್ಥಿ ಕೂಡ ಗಾಬರಿಯಿಂದ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆಗ ಶಾಲಾ ಸಿಬ್ಬಂದಿಗಳು ಆತನನ್ನು ಅಡ್ಡಗಟ್ಟಿ ಹಿಡಿದಿದ್ದರು. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದರು.
ಆ ಅಪ್ರಾಪ್ತ ಯುವಕನನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ. ಆ ಪಿಸ್ತೂಲ್ ಆತನ ಕೈಸೇರಿದ್ದು ಹೇಗೆಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮೂಲಗಳ ಪ್ರಕಾರ ಆ ಬಾಲಕನ ಚಿಕ್ಕಪ್ಪ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದು, ಆ ಪಿಸ್ತೂಲ್ಗೂ ಅವರು ಲೈಸೆನ್ಸ್ ಪಡೆದಿದ್ದರು. ರಜೆಯ ಮೇಲೆ ಮನೆಯಲ್ಲಿದ್ದ ಅವರ ಪಿಸ್ತೂಲನ್ನು ಬಾಲಕ ಬ್ಯಾಗ್ನಲ್ಲಿರಿಸಿಕೊಂಡಿದ್ದ ಎನ್ನಲಾಗಿದೆ.