ಅಬುಧಾಬಿ: ಮಾರ್ಚ್ 1 ರ ಮೊದಲು ಅವಧಿ ಮುಗಿದ ವೀಸಾಗಳೊಂದಿಗೆ ಯುಎಇಯಲ್ಲಿ ಉಳಿದುಕೊಂಡಿರುವವರಿಗೆ ದಂಡ ರಹಿತವಾಗಿ ದೇಶ ತೊರೆಯುವ ಅವಧಿ ಇಂದು ಕೊನೆಗೊಂಡಿದೆ. ನಾಳೆಯಿಂದ, ದೇಶದಲ್ಲಿ ವಸತಿ, ಸಂದರ್ಶಕ ಮತ್ತು ಪ್ರವಾಸಿ ವೀಸಾಗಳಲ್ಲಿ ಅಕ್ರಮವಾಗಿ ಉಳಿದುಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇ ಘೋಷಿಸಿದ ಕ್ಷಮಾದಾನದ ಪ್ರಯೋಜನವನ್ನು ಈಗಾಗಲೇ ಸಾವಿರಾರು ಮಂದಿ ಪಡೆದಿದ್ದಾರೆ.ಐಡೆಂಟಿ ಆಂಡ್ ಸಿಟಿಜನ್ಶಿಪ್ ಫೆಡರಲ್ ಅಥಾರಿಟಿಯು ನಾಳೆಯಿಂದ ದೇಶವನ್ನು ತೊರೆಯದವರ ವಿರುದ್ಧ “ಕಠಿಣ ಕ್ರಮ” ತೆಗೆದುಕೊಳ್ಳಲಾಗುವುದು ಎಂದಿದೆ. ಕೋವಿಡ್ ಕಾರಣ ಗಡಿ ಮುಚ್ಚಿದ ನಂತರ ದೇಶವನ್ನು ತೊರೆಯಲು ಸಾಧ್ಯವಾಗದವರಿಗೆ ಈಗಾಗಲೇ 10 ತಿಂಗಳ ಅವಧಿ ನೀಡಲಾಗಿತ್ತು.
ಅಕ್ರಮವಾಗಿ ಯುಎಇಯಲ್ಲಿ ಉಳಿದುಕೊಂಡಿದ್ದವರ ದಂಡವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಕ್ಷಮಾದಾನದ ಲಾಭವನ್ನು ಪಡೆದುಕೊಂಡು ದೇಶವನ್ನು ತೊರೆಯುವವರು ಬೇರೆ ವೀಸಾದಲ್ಲಿ ಯುಎಇಗೆ ಮರಳಲು ಯಾವುದೇ ಅಡ್ಡಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.