ಚಿಕ್ಕಮಗಳೂರು: ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಕಡೂರು ತಾಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಸಂಜೆ ಮನೆಯಿಂದ ಸ್ಯಾಂಟ್ರೋ ಕಾರಿನಲ್ಲಿ ತೆರಳಿದ್ದ ಅವರು, ರಾತ್ರಿಯಾದರೂ ವಾಪಸ್ ಬಾರದ ಕಾರಣ ಗನ್ ಮ್ಯಾನ್, ಪೊಲೀಸರು, ಸ್ಥಳೀಯರು ಹುಡುಕಾಟ ನಡೆಸಿದ್ದು, ಮೃತದೇಹ ಪತ್ತೆಯಾಗಿದೆ.
ಸದ್ಯ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಅವರು ನಿನ್ನೆ ಸಂಜೆ 4 ಗಂಟೆಗೆ ಸ್ಯಾಂಟ್ರೋ ಕಾರಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಕೆಲವರನ್ನು ಮಾತನಾಡಿಸಿ ಬಳಿಕ ಜನರಲ್ಲಿ ರೈಲು ಸಂಚಾರದ ಮಾಹಿತಿಯನ್ನೂ ಪಡೆದುಕೊಂಡಿದ್ರು. ಬಳಿಕ ಬಾಣಾವರ ಕಡೆಗೆ ತೆರಳಿದ್ದರು. ಅಲ್ಲಿ ನೀರು ತರುವುದಕ್ಕೆಂದು ಕಾರಿನಿಂದ ಇಳಿದು ಹೋದ ಅವರು, ನಂತರ ಬಂದು ಚಾಲಕನಿಗೆ ಕಾರಿನಲ್ಲೇ ಇರುವಂತೆ ಹೇಳಿ ತೆರಳಿದ್ದರು.
ಹಾಗೆ ಹೋದವರು ಮತ್ತೆ ಬಹಳ ಹೊತ್ತಾದರೂ ಬಾರದೇ ಇದ್ದಾಗ, ಚಾಲಕ ಫೋನ್ ಕರೆ ಮಾಡಿದ್ದ. ಪ್ರತಿಕ್ರಿಯೆ ಸಿಗದ ಕಾರಣ ಧರ್ಮೇಗೌಡರ ಪುತ್ರನಿಗೆ ಕರೆ ಮಾಡಿದ ಚಾಲಕ, ಧರ್ಮೇಗೌಡರು ಫೋನ್ ಪಿಕ್ ಮಾಡದೇ ಇರುವ ವಿಚಾರ ತಿಳಿಸಿದ್ದ. ಇದಾಗಿ ಕಡೂರು ಪೊಲೀಸರಿಗೂ ಮಾಹಿತಿ ಹೋಗಿದ್ದು ಎಲ್ಲರೂ ಹುಡುಕಾಟ ಆರಂಭಿಸಿದ್ದಾರೆ.
ಕೊನೆಗೆ ಗುಣಸಾಗರದಲ್ಲಿ ಮೊಬೈಲ್ ಲೊಕೇಶನ್ ಪತ್ತೆಯಾಗಿದೆ. ತೀವ್ರ ಹುಡುಕಾಟ ನಡೆಸಿದಾಗ ರೈಲ್ವೆ ಹಳಿ ಸಮೀಪ ಎರಡು ಭಾಗವಾಗಿರುವ ಮೃತದೇಹ ಪತ್ತೆಯಾಗಿದೆ. ಪೊಲೀಸರು ಕೂಡಲೇ ಮುಂದಿನ ಕ್ರಮಗಳನ್ನು ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ :
ವಿಧಾನ ಪರಿಷತ್ ಉಪ ಸಭಾಪತಿ ಎಸ್. ಎಲ್ . ಧರ್ಮೇಗೌಡ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಅವರು ತೀವ್ರ. ಸಂತಾಪ ವ್ಯಕ್ತಪಡಿಸಿದ್ದಾರೆ.ಎಸ್. ಎಲ್ . ಧರ್ಮೇಗೌಡ ಅವರ ಅಕಾಲಿಕ ನಿಧನ ಅತ್ಯಂತ ದುರದೃಷ್ಟಕರ ಹಾಗೂ ತೀವ್ರ ಆಘಾತ ತಂದಿದೆ.
ವಿಧಾನ ಪರಿಷತ್ ಸದಸ್ಯರಾಗಿ, ಉಪ ಸಭಾಪತಿಯಾಗಿ ಅವರ ಕಾರ್ಯ ವೈಖರಿ ಅತ್ಯುತ್ತಮವಾಗಿತ್ತು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಈ ಆಘಾತವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.