janadhvani

Kannada Online News Paper

ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ: ಸುಗ್ರೀವಾಜ್ಞೆ ಮೂಲಕ ಜಾರಿ

ಬೆಂಗಳೂರು,ಡಿ.28: ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಹೊರಟಿದೆ. ಇಂದು ಸಂಪುಟ ಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ಅನುಮೋದನೆ ಪಡೆಯಲಾಗಿದೆ. ಇದೀಗ ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿದೆ.

ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಮತ್ತು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವರು, ಗೋಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಪಕ್ಷದಿಂದ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಅಸ್ತಿತ್ವದಲ್ಲಿದೆ. ಈಗ ಈ ಕಾಯ್ದೆಗೆ ಹೊಸ ರೂಪ ಕೊಡಲಾಗಿದೆ ಅಷ್ಟೇ. ಹಿಂದಿನ ಕಾಯ್ದೆಯಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದೆ. ಗಂಡು ಕರುವನ್ನು ಸಾಕಲು ಆಗದವರು ಅದನ್ನು ಗೋಶಾಲೆಗೆ ತಂದು ಬಿಡಬಹುದು. ಅಂಥ ಗೋವುಗಳನ್ನ ಸರ್ಕಾರವೇ ನಿರ್ವಹಣೆ ಮಾಡುತ್ತದೆ. ಗೋಹತ್ಯೆಗೆ ದಂಡವನ್ನು ಹೆಚ್ಚಳ ಮಾಡಲಾಗಿದೆ.

ಹಿಂದಿನ ಕಾಯ್ದೆಯಲ್ಲಿ 12 ವರ್ಷದ ಹಸು ಮತ್ತು 13 ವರ್ಷದ ಎಮ್ಮೆಯನ್ನ ವಧಿಸಲು ಅವಕಾಶ ಇತ್ತು. ಹೊಸ ಕಾಯ್ದೆಯಲ್ಲಿ ಅದನ್ನ ತೆಗೆದುಹಾಕಿದ್ದೇವೆ. ಆದರೂ ಗೋಹತ್ಯೆ ನಿಷೇಧ ಕಾಯ್ದೆಗೆ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಸುದೀರ್ಘ ರಾಜಕೀಯದಲ್ಲಿರುವ ಸಿದ್ದರಾಮಯ್ಯ ಈ ಬಗ್ಗೆ ಚರ್ಚೆ ಮಾಡದೆಯೇ ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಟೀಕಿಸಿದ್ದಾರೆ.

ಸಂಪುಟದಲ್ಲಿ ಸುಗ್ರೀವಾಜ್ಞೆಗೆ ತೆಗೆದುಕೊಂಡಿರುವ ನಿರ್ಧಾರವನ್ನು ನಾಳೆ ರಾಜ್ಯಪಾಲರ ಬಳಿ ಕಳುಹಿಸಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ರಾಜ್ಯಪಾಲರಿಂದ ಅಧಿವೇಶನ ಕರೆಸಿ ವಿಧಾನಪರಿಷತ್ನಲ್ಲಿ ವಿಧೇಯಕಕ್ಕೆ ಮತ್ತೊಮ್ಮೆ ಒಪ್ಪಿಗೆ ಪಡೆಯುವ ಪ್ರಯತ್ನಕ್ಕೆ ನಿರ್ಧರಿಸಲಾಗಿತ್ತಾದರೂ ಅಂತಿಮವಾಗಿ ಸುಗ್ರೀವಾಜ್ಞೆಯ ಮೊರೆ ಹೋಗಲಾಗುತ್ತಿದೆ. ಸುಗ್ರೀವಾಜ್ಞೆಯಾಗಿ ಆರು ತಿಂಗಳಲ್ಲಿ ವಿಧೇಯಕವು ಪರಿಷತ್ನಲ್ಲಿ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಅನುಮೋದನೆ ಸಿಗದಿದ್ದರೆ ಕಾಯ್ದೆ ನಿಷ್ಕ್ರಿಯಗೊಳ್ಳುತ್ತದೆ.

error: Content is protected !! Not allowed copy content from janadhvani.com