janadhvani

Kannada Online News Paper

ಮಕ್ಕಳನ್ನು ಮರು ದಾಖಲಾತಿ ಮಾಡುವುದು ಪೋಷಕರ ಕರ್ತವ್ಯ- ಶಿಕ್ಷಣ ಸಚಿವ

ಬೆಂಗಳೂರು: ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯ ಆಶಯದಂತೆ ಮಕ್ಕಳನ್ನು ಮುಂದಿನ ತರಗತಿಗಳಿಗೆ ಮರು ದಾಖಲಾತಿ ಮಾಡುವುದು ಪೋಷಕರ ಕರ್ತವ್ಯವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡಲು ಮುಂದಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದ ವಿವಿಧ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಶಾಲಾ ಮಂಡಳಿಗಳು, ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಉಪಕ್ರಮಗಳ ಕುರಿತು ಚರ್ಚಿಸಿದ ಅವರು, ಪೋಷಕರು ತಮ್ಮ ಮಕ್ಕಳನ್ನು ತಮ್ಮ ಮಕ್ಕಳು ಓದಿದ ಶಾಲೆ ಇಲ್ಲವೇ ತಮಗೆ ಅನುಕೂಲವಾದ ಶಾಲೆಗಳಲ್ಲಿ ಮರು ದಾಖಲಾತಿಗೊಳಿಸಲು ಕ್ರಮ ವಹಿಸಬೇಕು ಎಂದಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗೆ ದಾಖಲಾತಿ ಮಾಡದೇ ಇರುವುದು ಪರಿಹಾರವಾಗುವುದಿಲ್ಲ. ಇದು ಮಕ್ಕಳ ಹಕ್ಕಿನ ಕಸಿತವೂ ಆಗುತ್ತದೆ. ತಮ್ಮ ಮಕ್ಕಳನ್ನು ಮರುದಾಖಲಾತಿ ಮಾಡುವುದರಿಂದ ರಾಜ್ಯದ ಶಾಲೆಗಳಲ್ಲಿ ತರಗತಿವಾರು ಮಕ್ಕಳ ದಾಖಲಾತಿ ಸಂಖ್ಯೆ ಲೆಕ್ಕಕ್ಕೆ ದೊರೆಯಲಿದ್ದು, ಅದು ಮುಂದಿನ ತರಗತಿಗಳಿಗೆ ಮಕ್ಕಳನ್ನು ಉತ್ತೀರ್ಣಗೊಳಿಸಲು ಅನುವಾಗಲಿದೆ. ಮಕ್ಕಳ ಮರು ದಾಖಲಾತಿಗೆ ಎರಡು ಬಾರಿ ಸಮಯ ವಿಸ್ತರಿಸಲಾಗಿತ್ತು. ಆದರೂ ಕೆಲ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗಳಿಗೆ ಇನ್ನೂ ಮರು ದಾಖಲಾತಿ ಮಾಡದಿರುವುದಕ್ಕೆ ಕೋವಿಡ್ ಸಾಂಕ್ರಾಮಿಕ ಒಂದು ನೆಪವಾಗಬಾರದು ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಮಕ್ಕಳ ಹಿತದೃಷ್ಟಿಯಿಂದ ಶಾಲಾ ಶುಲ್ಕ ಹೆಚ್ಚಳ ಮಾಡದಿರುವ ಮತ್ತು ಸಾಧ್ಯವಾದಷ್ಟು ಶುಲ್ಕ ಇಳಿಸುವಂತಹ ಮತ್ತು ಶುಲ್ಕ ಪಾವತಿಸಲು ಕಂತುಗಳನ್ನು ನೀಡುವಂತಹುದು ಸೇರಿದಂತೆ ಮಾನವೀಯ ನಿಲುವುಗಳನ್ನು ಕೈಗೊಳ್ಳಲು ಹಿಂಜರಿಯಬಾರದು.

ಶಾಲಾ ಶುಲ್ಕ ನಿಗದಿ ವಿಚಾರದಲ್ಲಿ ಮಕ್ಕಳ ಪೋಷಕರೊಂದಿಗೆ ಚರ್ಚಿಸಿ ಶಾಲಾ ಸಂಘಟನೆಗಳು ಅವರ ವಿಶ್ವಾಸವನ್ನೂ ಪಡೆದುಕೊಂಡು ಶೀಘ್ರ ಒಂದು ನಿರ್ಧಾರಕ್ಕೆ ಬಂದು ಸರ್ಕಾರಕ್ಕೆ ತಿಳಿಸಿದಲ್ಲಿ ಈ ಸಂಬಂಧ ಶಾಲಾ ಶುಲ್ಕ ನಿಗದಿ ಕುರಿತಂತೆ ಸರ್ಕಾರವು ಒಂದು ನಿರ್ಧಾರಕ್ಕೆ ಬರಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಕೋವಿಡ್ ಸಮಸ್ಯೆ ಪ್ರತಿಯೊಬ್ಬರ ಜೀವನದ ಮೇಲೂ ತನ್ನದೇ ಆದ ರೀತಿಯ ಪರಿಣಾಮ ಬೀರಿದೆ. ಅದು ಮಕ್ಕಳ ಪೋಷಕರಿಗೆ ಆಗಿರುವಂತೆಯೇ ಶಾಲೆಗಳ ಮೇಲೂ ಆಗಿದೆ. ಇದು ಶಾಲೆ-ಮಕ್ಕಳು ಮಾತ್ರವೇ ಅಲ್ಲ, ದೇಶದ ಜನರ ಜೀವ ಮತ್ತು ಜೀವನದ ಮೇಲೆ ಸಾರ್ವತ್ರಿಕವಾದ ದುಷ್ಪರಿಣಾಮವನ್ನುಂಟು ಮಾಡಿರುವುದರಿಂದ ಪ್ರತಿಯೊಬ್ಬರೂ ಈ ಪರಿಸ್ಥಿತಿಯಲ್ಲಿ ಸಹ್ಯವಾದ ನಿರ್ಧಾರಗಳನ್ನೇ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.

error: Content is protected !! Not allowed copy content from janadhvani.com