ಎಲ್ಲ ಕಾನೂನು ಎಲ್ಲ ವರ್ಗದವರಿಗೂ ಅನ್ವಯ ಆಗಬೇಕು. ಅದಕ್ಕೆ ಯಾವುದೋ ಬೇರೆ ಭಾಷೆ ಹೆಸರು, ಕೆಲವೇ ಧರ್ಮವನ್ನು ಉದ್ದೇಶಿಸುವ ಅಗತ್ಯಗಳು ಇಲ್ಲ.
ಮಂಗಳೂರು: ‘ಮತಾಂತರ ಕಾಯ್ದೆ ಈಗಾಗಲೇ ರಾಜ್ಯದಲ್ಲಿ ಇದೆ. ಇದಕ್ಕೆ ‘ಲವ್ ಜಿಹಾದ್’ ಎಂಬ ಹೆಸರು ಯಾಕೆ ಬೇಕು? ‘ಜಿಹಾದ್’ ಎಂಬ ಶಬ್ದದ ಬದಲು ಮತಾಂತರ ಎಂಬ ಹೆಸರನ್ನೇ ಇಡಬಹುದಿತ್ತಲ್ವ? ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇದ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರವೇ ತಂದಿದೆ. ಬಿಜೆಪಿ ಯಾವುದೇ ಜನ ಪರವಾದ ಕಾಯಿದೆಗಳನ್ನು ತರಲಿಲ್ಲ. ಜನರ ಮಧ್ಯೆ ಗೊಂದಲ ತರಲು ಇಂತಹ ಚರ್ಚೆಯನ್ನು ಆಗಾಗ್ಗೆ ಹರಿಯಬಿಡುತ್ತಾರೆ’ ಎಂದು ದೂರಿದರು.
‘ಇಂತಹ ವಿಚಾರವನ್ನು ಸಂಸತ್ತಿನಲ್ಲಿ ಚರ್ಚಿಸಬೇಕು. ಜನರ ಮಧ್ಯೆ ವೈಮನಸ್ಸು ಹುಟ್ಟಿಸಲು ಚರ್ಚೆ ಹುಟ್ಟು ಹಾಕಬಾರದು. ಕಾನೂನು ತರುವ ಉದ್ದೇಶ ಇದ್ದರೆ, ಸಂಸತ್ತಿನ ಅಧಿವೇಶನ ಕರೆದು ಚರ್ಚಿಸಲಿ. ಎಲ್ಲ ಕಾನೂನು ಎಲ್ಲ ವರ್ಗದವರಿಗೂ ಅನ್ವಯ ಆಗಬೇಕು. ಅದಕ್ಕೆ ಯಾವುದೋ ಬೇರೆ ಭಾಷೆ ಹೆಸರು, ಕೆಲವೇ ಧರ್ಮವನ್ನು ಉದ್ದೇಶಿಸುವ ಅಗತ್ಯಗಳು ಇಲ್ಲ. ಕರ್ನಾಟಕದ ಕಾಯ್ದೆಗೆ ಅರೇಬಿಕ್ ಪದ ಇಡುವುದು ಯಾವ ದುರುದ್ದೇಶವನ್ನು ಹೊಂದಿದೆ? ಎಂದು ಅವರೇ ತಿಳಿಸಲಿ’ ಎಂದರು.
‘ಬಿಜೆಪಿ ಜನಪರ ಕಾಯ್ದೆಗಳನ್ನು ತರುವುದಿಲ್ಲ. ಜನರ ಮಧ್ಯೆ ಬರೀ ಗೊಂದಲ ಸೃಷ್ಟಿಸುತ್ತದೆ’ ಎಂದು ಆರೋಪಿಸಿದರು.