ಶ್ರೀನಗರ, ನ 27: ಮಾಜಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರನ್ನು ಶುಕ್ರವಾರ ಅವರ ಗುಪ್ಕರ್ ನಿವಾಸದಲ್ಲಿ ಮತ್ತೊಮ್ಮೆ ಗೃಹಬಂಧನಲ್ಲಿರಿಸಲಾಗಿದೆ ಎಂದು ಯುಎನ್ಐ ವರದಿ ಮಾಡಿದೆ.
ಈ ಮೊದಲು ಮೆಹಬೂಬಾ ಮುಫ್ತಿ ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿನ ವಹೀದ್-ಉರ್ ರೆಹಮಾನ್ ಪರ್ರಾ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅನುಮತಿ ನಿರಾಕರಿಸಲಾಗಿದೆ. ಅಲ್ಲಿಗೆ ಭೇಟಿ ನೀಡಲು ಯತ್ನಿಸಿದ ತಮ್ಮ ಪುತ್ರಿ ಇಲ್ತಿಜಾಳನ್ನು ಕೂಡ ಗೃಹಬಂಧನದಲ್ಲಿರಿಸಲಾಗಿದೆ ಎಂದು ಆರೋಪಿಸಿದ್ದರು.
ಬಿಜೆಪಿ ಮಂತ್ರಿಗಳು ಮತ್ತು ಅವರ ಕೈಗೊಂಬೆಗಳಿಗೆ ಕಾಶ್ಮೀರದ ಪ್ರತಿಯೊಂದು ಮೂಲೆಯಲ್ಲೂ ತಿರುಗಾಡಲು ಅನುಮತಿಸಲಾಗಿದೆ ಆದರೆ ತಮ್ಮ ವಿಷಯದಲ್ಲಿ ಮಾತ್ರ ಭದ್ರತೆಯ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಮೆಹಬೂಬಾ ಅವರ ಗುಪ್ಕರ್ ನಿವಾಸದ ಮುಖ್ಯ ಗೇಟ್ ಮುಂದೆ ಭದ್ರತಾ ಪಡೆ ವಾಹನವನ್ನು ನಿಯೋಜಿಸಲಾಗಿದೆ. 2019ರ ಆ.5ರಿಂದ 14 ತಿಂಗಳ ಕಾಲ ಗೃಹ ಬಂಧನದಲ್ಲಿದ್ದ ಮೆಹಬೂಬಾ ಅವರು ಅಕ್ಟೋಬರ್‌ನಲ್ಲಿ ಬಿಡುಗಡೆಗೊಂಡಿದ್ದರು.
ಏತನ್ಮಧ್ಯೆ, ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ವೈಯಕ್ತಿಕ ಸ್ವಾತಂತ್ರ್ಯವನ್ನು ಸರ್ಕಾರ ಉಲ್ಲಂಘಿಸಿತ್ತಿದೆ ಎಂದು ಆರೋಪಿಸಿದ್ದಾರೆ.
ಈಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಮೆಹಬೂಬಾ “ನನ್ನನ್ನು ಮತ್ತೊಮ್ಮೆ ಬಂಧಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ನಮಗೆ ಪುಲ್ವಾದ ಪರಾವಹೀದ್ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅನುಮತಿ ನಿರಾಕರಿಸಲಾಗಿದೆ. ಬಿಜೆಪಿ ಸಚಿವರು ಮತ್ತು ಅವರ ಕೈಗೊಂಬೆಗಳಿಗೆ ಎಲ್ಲೆಡೆ ಓಡಾಡಲು ಅನುಮತಿ ಇದೆ. ನಮ್ಮ ವಿಷಯದಲ್ಲಿ ಮಾತ್ರ ಭದ್ರತೆಯ ಸಮಸ್ಯೆ ಎದುರಾಗಿದೆ” ಎಂದು ಆರೋಪಿಸಿದ್ದಾರೆ.
“ಅವರ ಹಿಂಸಾತ್ಮಕ ಪ್ರವೃತ್ತಿಗೆ ಇತಿಮಿತಿಯೇ ಇಲ್ಲ. ವಹೀದ್ ಅನ್ನು ಆಧಾರರಹಿತ ಆರೋಪಗಳಿಂದ ಬಂಧಿಸಲಾಗಿದೆ. ನನಗೆ ಅವರ ಕುಟುಂಬ ಸದಸ್ಯರಿಗೆ ಸಮಾಧಾನ ಮಾಡಲು ಅನುಮತಿ ನಿರಾಕರಿಸಲಾಗಿದೆ. ಅವರನ್ನು ಭೇಟಿ ಮಾಡಲು ಯತ್ನಿಸಿದ ನನ್ನ ಪುತ್ರಿ ಇಲ್ತಿಜಾಳನ್ನು ಗೃಹಬಂಧನದಲ್ಲಿಡಲಾಗಿದೆ ” ಎಂದಿದ್ದಾರೆ.