ಮಂಗಳೂರು: ಕೈಕಂಬ ಪರಿಸರದಲ್ಲಿ ಇತ್ತೀಚೆಗೆ ವೆನ್ಝ್ ಬಟ್ಟೆ ಅಂಗಡಿ ಮಾಲೀಕರಾದ ಅಬ್ದುಲ್ ಅಝೀಝ್ ಅವರನ್ನು ಹತ್ಯೆಗೈಯಲು ಭೀಕರ ತಲವಾರು ದಾಳಿ ನಡೆಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೋಲೀಸರು ಭರವಸೆ ನೀಡಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಂ ಶಾಫಿ ಸಅದಿ ನೇತೃತ್ವದ ನಿಯೋಗವು ಪಣಂಬೂರು ಅಸಿಸ್ಟೆಂಟ್ ಪೋಲೀಸ್ ಕಮಿಷನರ್ ಶ್ರೀ ಬೆಳ್ಳಿಯಪ್ಪ ,ಬಜ್ಪೆ ಪೊಲೀಸ್ ಇನ್ಸ್ ಪೆಕ್ಟರ್ ಕೆ ಆರ್ ನಾಯಕ್ ಮತ್ತು ಬಜ್ಪೆ ಸಬ್ ಇನ್ಸ್ ಪೆಕ್ಟರ್ ಸತೀಶ್ ರೊಂದಿಗೆ ನಡೆಸಿದ ಸುದೀರ್ಘ ಮಾತುಕತೆಯ ಬಳಿಕ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೋಲೀಸರಿಂದ ಭರವಸೆ ಲಭಿಸಿದೆ.
ಈ ಹಿನ್ನೆಲೆಯಲ್ಲಿ ನ.23ರಂದು ಬಜ್ಪೆ ಪೋಲೀಸ್ ಠಾಣೆ ಎದುರು ನಡೆಸಲು ಉದ್ದೇಶಿಸಲಾದ ಬೃಹತ್ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ.
ನಿಯೋಗದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಎಂ ಮುಮ್ತಾಜ್ ಅಲಿ, ತಾಲೂಕು ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಜಿಲ್ಲಾ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ಮಂಗಳೂರು, ಕಂದಾವರ ಜುಮಾ ಮಸೀದಿ ಅಧ್ಯಕ್ಷ ಮೆಘಾ ಬಷೀರ್, ಪಾಣೆಮಂಗಳೂರು ನೆಹರೂ ನಗರ ಅಧ್ಯಕ್ಷ ಪಿ ಎಸ್ ಮೋನು, ಕೈಕಂಬ ಪರಿಸರದ ಹಲವು ನಾಯಕರು ಹಾಗೂ ಅಬ್ದುಲ್ ಅಝೀಝ್ ರ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಾಮಾಜಿಕ, ಶೈಕ್ಷಣಿಕ, ಬಡವರ ಕಲ್ಯಾಣ ಕಾರ್ಯಗಳಿಗಾಗಿ ನಿರಂತರವಾಗಿ ದುಡಿಯುತ್ತಿದ್ದ, ವಿವಿಧ ಮುಸ್ಲಿಂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ಅಝೀಝ್ ರನ್ನು ನವೆಂಬರ್ 15ರಂದು ರಾತ್ರಿ ಅಕ್ರಮಿಗಳು ತಲವಾರು ದಾಳಿ ನಡೆಸಿ ಹತ್ಯೆಗೆ ಶ್ರಮಿಸಿದ್ದರು. ಗಂಭೀರ ಗಾಯಗೊಂಡಿರುವ ಅಝೀಝ್ ರವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.