janadhvani

Kannada Online News Paper

ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ಖಂಡಿಸಿ ಡಿ. 5 ರಂದು ಕರ್ನಾಟಕ ಬಂದ್‌

ಪ್ರಸ್ತುತ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ಬಹುತೇಕ ನಿಗಮಗಳು ಸರ್ಕಾರದ ಆರ್ಥಿಕ ನೆರವಿನಿಂದ ವಂಚಿತಗೊಂಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನಗಳನ್ನು ಕಡಿತಗೊಳಿಸಿದ ಪರಿಣಾಮ ಬಡ ವಿದ್ಯಾರ್ಥಿ, ಪೋಶಕರು ಸಂಕಷ್ಟಕ್ಕೀಡಾಗಿದ್ದಾರೆ

ಬೆಂಗಳೂರು: ಮರಾಠರ ಅಭಿವೃದ್ದಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಒಕ್ಕೂಟಗಳು ಡಿಸೆಂಬರ್‌ 5 ರಂದು ನೀಡಿರುವ ಬಂದ್‌ ಕರೆ ಅಧಿಕೃತಗೊಂಡಿದೆ. ಶುಕ್ರವಾರ ಒಕ್ಕೂಟದ ಪ್ರಮುಖರು ಬೆಂಗಳೂರಿನಲ್ಲಿ ಸಭೆ ನಡೆಸಿ ಬಂದ್‌ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ಬಹುತೇಕ ನಿಗಮಗಳು ಸರ್ಕಾರದ ಆರ್ಥಿಕ ನೆರವಿನಿಂದ ವಂಚಿತಗೊಂಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನಗಳನ್ನು ಕಡಿತಗೊಳಿಸಿದ ಪರಿಣಾಮ ಬಡ ವಿದ್ಯಾರ್ಥಿ, ಪೋಶಕರು ಸಂಕಷ್ಟಕ್ಕೀಡಾಗಿದ್ದಾರೆ.

ಚಾಲ್ತಿಯಲ್ಲಿರುವ ಅಭಿವೃದ್ಧಿ ನಿಗಮಗಳಿಗೇ ಆರ್ಥಿಕ ಸಹಾಯ ನೀಡಲು ಬೊಕ್ಕಸ ಖಾಲಿಯಾಗಿದೆ ಎನ್ನುತಿರುವ ಸರ್ಕಾರವು ಬೆಳಗಾವಿ ಉಪ ಚುನಾವಣೆಯನ್ನು ಮನಗಂಡು ಮರಾಠರ ಒಲೈಕೆಗೆ ಮುಂದಾಗಿದೆ.

ಕರ್ನಾಟಕ ಬಂದ್‌ಗೆ ಹಲವು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಇನ್ನು ಹೋಟೆಲ್ ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರ ಸಂಘಟನೆಗಳೂ ಕೂಡಾ ನೈತಿಕ ಬೆಂಬಲ ಸೂಚಿಸಿವೆ.

ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ತಿಳಿಸಿವೆ. ಅಲ್ಲದೆ ಮರಾಠಿ ಅಭಿವೃದ್ದಿ ಪ್ರಾಧಿಕಾರ ವಿರೋಧಿಸಿ ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ ವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ನಡೆಯಲಿರುವ ಬಂದ್‌ಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿಕೊಂಡಿದ್ದಾರೆ. ಆದರೆ ಕನ್ನಡ ರಕ್ಷಣಾ ವೇದಿಕೆ ಇನ್ನೂ ತಮ್ಮ ಸಂಘಟನೆಯ ನಿಲುವನ್ನು ಅಧಿಕೃತಗೊಳಿಸಿಲ್ಲ.
ಮರಾಠಿಗರ ಅಭಿವೃದ್ದಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮರಾಠಿ ಅಭಿವೃದ್ದಿ ನಿಗಮವನ್ನು ಸ್ಥಾಪನೆ ಮಾಡಿದೆ. ಆದರೆ ಇದಕ್ಕೆ ಕನ್ನಡ ಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮರಾಠಿ ಅಭಿವೃದ್ದಿ ನಿಗಮವನ್ನು ವಾಪಸ್‌ ಪಡೆದುಕೊಳ್ಳಲು ಆಗ್ರಹಿಸಿವೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.

error: Content is protected !! Not allowed copy content from janadhvani.com