janadhvani

Kannada Online News Paper

ಮಸೀದಿಗಳ ಧ್ವನಿವರ್ಧಕಗಳನ್ನು ನಿಷೇಧಿಸಿಲ್ಲ- ಪೊಲೀಸ್ ಮಹಾನಿರ್ದೇಶಕರ ಸ್ಪಷ್ಟನೆ

ಬೆಂಗಳೂರು: ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ ಎನ್ನಲಾದ ಸುದ್ದಿಗೆ ಸ್ಪಷ್ಟನೆ ಲಭಿಸಿದೆ.

ಒಂದು ಪ್ರತ್ಯೇಕ ಧರ್ಮದವರನ್ನು ಗುರಿಯಾಗಿಸಿ ಹೊರಡಿಸಲಾದ ಆದೇಶದಂತೆ ಸ್ಪಷ್ಟವಾಗಿ ಗೋಚರಿಸುತ್ತಿದ್ದ, ರಾಜ್ಯ ಪೋಲೀಸ್ ಮಹಾನಿರ್ದೇಶಕರ ಸುತ್ತೋಲೆಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರಗೊಂಡು, ಸಮಾನ ಮನಸ್ಕರ ಆಕ್ರೋಶಕ್ಕೆ ಗುರಿಯಾಗಿತ್ತು.

ಈ ಸಂಬಂಧ ಕರ್ನಾಟಕ ಸ್ಟೇಟ್ ಪೊಲೀಸ್ ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ತಿಳಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ರೀತಿಯ ಆದೇಶವನ್ನು ಪ್ರಕಟಿಸಿಲ್ಲ.

ಧ್ವನಿವರ್ಧಕ ಕುರಿತು ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರವು ಮೇಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಕ್ಲರ್ಕ್ ಮೂಲಕ ಬಿಡುಗಡೆಯಾಗಿರುವ ಪತ್ರವಾಗಿದೆ.

ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಯಾರೂ ಈ ವದಂತಿಯನ್ನು ನಂಬಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಸುತ್ತೋಲೆಯಲ್ಲಿ ಏನಿದೆ?
ಕಳೆದ ತಿಂಗಳು ವಕೀಲರಾದ ಹರ್ಷ ಮುತಾಲಿಕ್, ಮಸೀದಿಯಲ್ಲಿನ ಧ್ವನಿ ವರ್ಧಕಗಳಿಂದ ಇತರೇ ಧರ್ಮದರಿಗೆ ತೊಂದರೆ ಆಗುತ್ತಿದೆ. ದಿನಕ್ಕೆ ಐದಾರು ಬಾರಿ ಪ್ರಾರ್ಥನೆ ಮಾಡಲಾಗುತ್ತದೆ. ಇದರಿಂದ ಮಕ್ಕಳಿಗೆ, ವಯಸ್ಸಾದವರಿಗೆ, ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಮಾಡಬೇಕು ಎಂದು ದೂರು ನೀಡಿದ್ದರು.

ಈಗ ಈ ದೂರಿಗೆ ಸ್ಪಂದಿಸಿದ ಡಿಜಿ ಪ್ರವೀಣ್ ಸೂದ್ ರಾಜ್ಯದ ಎಲ್ಲ ಜಿಲ್ಲೆಗಳ ಎಸ್‍ಪಿಗಳಿಗೆ ಹಾಗೂ ನಗರದ ಕಮಿಷನರ್‍ಗೆ ಪತ್ರ ಬರೆದಿದ್ದು, ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕ ತೆರವಿಗೆ ಆದೇಶ ಮಾಡಿದ್ದಾರೆ. ಜೊತೆಗೆ ಯಾವುದೇ ಅನಧಿಕೃತ ಧ್ವನಿವರ್ಧಕ ಬಳಕೆ ಮಾಡಿದ್ದರೆ, ಅದರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ತೆರವುಗೊಳಿಸಲು ಸೂಚಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿತ್ತು.

error: Content is protected !! Not allowed copy content from janadhvani.com