janadhvani

Kannada Online News Paper

ಮಸೀದಿಯ ಧ್ವನಿವರ್ಧಕಗಳ ನಿಷೇಧ: ಧಾರ್ಮಿಕ ತಾರತಮ್ಯದಿಂದ ಕೂಡಿದ ಆದೇಶ- ಕರ್ನಾಟಕ ಮುಸ್ಲಿಮ್ ಜಮಾಅತ್

ಆದೇಶ ಹಿಂದಕ್ಕೆ ಪಡೆಯುವವರೆಗೂ ಕಾನೂನಾತ್ಮಕ ಹೋರಾಟ- ಕರ್ನಾಟಕ ಮುಸ್ಲಿಮ್ ಜಮಾಅತ್

ಮಸೀದಿಯಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ನಿಷೇಧಿಸಿ, ತೆರವುಗೊಳಿಸಲು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಹೊರಡಿಸಿರುವ ಆದೇಶವು ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ.ಮಾತ್ರವಲ್ಲದೆ, ಧಾರ್ಮಿಕ ತಾರತಮ್ಯದಿಂದ ಕೂಡಿದೆ. ಭಾರತ ದೇಶದಲ್ಲಿ ಎಲ್ಲಾ ಧರ್ಮದ ಜನರಿಗೂ ಅವರವರ ಆಚರಣೆಗಳನ್ನು ಅವುಗಳ ವಿಧಿವಿಧಾನಗಳ ಸಹಿತ ಆಚರಿಸುವ ಸ್ವಾತಂತ್ರ್ಯವನ್ನು ಸಂವಿಧಾನವು ನೀಡಿದೆ.

ಆದರೆ, ವಕೀಲರಾದ ಹರ್ಷ ಮುತಾಲಿಕ್ ಎಂಬವರು ನೀಡಿರುವ ದೂರನ್ನು ಆಧರಿಸಿ ಏಕ ಪಕ್ಷೀಯವಾಗಿ ಪೊಲೀಸ್ ಮಹಾ ನಿರ್ದೇಶಕರು ಈ ಆದೇಶ ಹೊರಡಿಸಿದ್ದು, ಕೇವಲ ಮಸೀದಿಯನ್ನು ಗುರಿಯಾಗಿಸಿ ಕೊಂಡಿರುವುದರ ಹಿಂದೆ ದುರುದ್ದೇಶ ಇರುವಂತಿದೆ. ಹರ್ಷ ಮುತಾಲಿಕರ ದೂರು, ಪೊಲೀಸ್ ಮಹಾ‌ನಿರ್ದೇಶಕರ ಆದೇಶವು ವ್ಯವಸ್ಥಿತ ಪಿತೂರಿಯೊಂದರ ಭಾಗದಂತೆ ತೋರುತ್ತಿದೆ.

ಧ್ವನಿವರ್ಧಕಗಳನ್ನು ಕೇವಲ ಮಸೀದಿಗಳಲ್ಲಿ ಮಾತ್ರವಲ್ಲದೆ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಯಥೇಚ್ಛವಾಗಿ ಬಳಸಿಕೊಳ್ಳಲಾಗುತ್ತಿದೆ. ವಿವಿಧ ಹಬ್ಬಗಳ, ಆಚರಣೆಗಳ ಸಂದರ್ಭದಲ್ಲೂ ಕಿವಿ ಗಡಚಿಕ್ಕುವಂತೆ ಧ್ವನಿ ವರ್ಧಕಗಳನ್ನು ಅಳವಡಿಸಲಾಗುತ್ತದೆ. ಬೀದಿ ಬೀದಿಯಲ್ಲಿ ಆರ್ಕೆಸ್ಟ್ರಾ ಗಳನ್ನು ನಡೆಸಲಾಗುತ್ತದೆ. ಆಗ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ರೋಗಿಗಳಿಗೆ ಆಗದ ತೊಂದರೆ ಕೇವಲ ಮಸೀದಿಯಿಂದ ಮೊಳಗುವ ಎರಡು‌ ನಿಮಿಷದ ಬಾಂಗ್ ನಿಂದ ಆಗುತ್ತದೆ ಎಂದರೆ ಅದು ನಿಜಕ್ಕೂ ಹಾಸ್ಯಾಸ್ಪದ ವಿಚಾರವಷ್ಟೇ.

ಹರ್ಷ ಮುತಾಲಿಕರ ಕೋಮುವಾದಿ ಪೀಡಿತ ದೂರನ್ನು ಸ್ವೀಕರಿಸಿ ಕಳೆದ ಹಲವು ವರ್ಷಗಳಿಂದ ಮಸೀದಿಯ ಅವಿಭಾಜ್ಯ ಅಂಗವಾಗಿರುವ ಧ್ವನಿ ವರ್ಧಕಗಳನ್ನು ನಿಷೇಧಿಸಿ ಆದೇಶ ಹೊರಡಿಸಿರುವುದು ಧಾರ್ಮಿಕ ತಾರತಮ್ಯದ ಭಾಗವಾಗಿದೆ.
ಈ ನಿಷೇಧವನ್ನು ತಕ್ಷಣವೇ ಹಿಂದಕ್ಕೆ ಪಡೆಯುವಂತೆ ಕರ್ನಾಟಕ ಮುಸ್ಲಿಮ್ ಜಮಾಅತ್ ಆಗ್ರಹಿಸುತ್ತದೆ. ಇಲ್ಲದಿದ್ದಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ಕಾನೂನು ಹೋರಾಟಕ್ಕೆ ಸಿದ್ಧವಾಗಿದ್ದು, ಅಗತ್ಯವಾಗಿದ್ದಲ್ಲಿ ಈ‌ ನಿಷೇಧವನ್ನು ಹಿಂದೆಗೆದುಕೊಳ್ಳುವವರೆಗೆ ರಾಜ್ಯಾದ್ಯಂತ ಕಾನೂನು ರೀತ್ಯ ಪ್ರತಿಭಟನೆಗಳನ್ನು ಸಹ ನಡೆಸಲಿದೆ.

error: Content is protected !! Not allowed copy content from janadhvani.com