ಗುಜರಾತ್ ನ ಸೂರತ್ನಲ್ಲಿ ಚಿನ್ನದ ಮಳೆಯ ಸುದ್ದಿ ಭಾರೀ ಸದ್ದು ಮಾಡಿದೆ. ಸೂರತ್ ಏರ್ಪೋರ್ಟ್ ಸಮೀಪದ ದುಮಾಸ್ ಗ್ರಾಮದಲ್ಲಿ ಹಳೇ ನಾಣ್ಯದ ರೂಪದಲ್ಲಿರುವ ಚಿನ್ನದ ಬಿಸ್ಕಟ್ ಮಾದರಿ ಬಿಲ್ಲೆಗಳು ಪತ್ತೆಯಾಗಿವೆ.ಚಿನ್ನದ ಬಿಲ್ಲೆಗಳನ್ನು ಹಾರಿಸಿಕೊಳ್ಳಲು ಜನರು ಮುಗಿಬಿದ್ದಾರೆ. ಕಾರ್, ಬೈಕ್ಗಳಲ್ಲಿ ಬಂದು ಚಿನ್ನಕ್ಕಾಗಿ ಅಲೆದಾಡಿದ್ದಾರೆ.
ಪತ್ತೆಯಾದ ಚಿನ್ನದ ನಾಣ್ಯ ಮಾದರಿ ಬಿಲ್ಲೆಗಳ ಮೇಲೆ ಕೆಲವು ಸಿಂಬಲ್ಗಳಿವೆ. ಹೀಗಾಗಿ ಇವುಗಳನ್ನು ಸಂಗ್ರಹ ಮಾಡಿರೋ ಅಧಿಕಾರಿಗಳು ಪರೀಕ್ಷೆಗೂ ರವಾನೆ ಮಾಡಿದ್ದಾರೆ. ಸೂರತ್ ವಜ್ರಾಭರಣ ಉದ್ಯಮಕ್ಕೆ ಫೇಮಸ್. ಈ ಗ್ರಾಮದ ಪಕ್ಕದಲ್ಲೇ ಏರ್ಪೋರ್ಟ್ ಕೂಡಾ ಇದೆ. ಹೀಗಾಗಿ ಯಾರಾದ್ರೂ ಮಾರಾಟಕ್ಕೆ ತಗೆದುಕೊಂಡು ಹೋಗುವಾಗ ಚೆಲ್ಲಿರಬಹುದೇ, ಅಕ್ರಮವಾಗಿ ಸಾಗಿಸುತ್ತಿರುವಾಗ ಸಿಕ್ಕಿ ಬೀಳೋ ಭಯದಲ್ಲಿ ಯಾರಾದ್ರೂ ಎಸೆದು ಹೋಗಿರಬಹುದೇ ಎನ್ನುವ ಕುತೂಹಲ ಮನೆ ಮಾಡಿದೆ.
ಇನ್ನು ಇತ್ತ ಬೆಂಗಳೂರಿನ ಅನೇಕಲ್ ನಲ್ಲೂ ಸುರೀತಾ ಇದೆಯಂತೆ ಚಿನ್ನದ ಮಳೆ. ಮಳೆಯ ಜತೆ ಚಿನ್ನವೂ ಸುರಿದಿದೆ ಎನ್ನುತ್ತಿದ್ದಾರೆ ಅನೇಕಲ್ ಜನ. ಚಿನ್ನಕ್ಕಾಗಿ ಮುಗಿಬಿದ್ದು ಬಂಗಾರ ಹೆಕ್ಕುವಲ್ಲಿ ಇಲ್ಲಿನ ಜನ ತಲ್ಲೀನರಾಗಿದ್ದಾರೆ. ಬೆಂಗಳೂರಿನ ಹೊರವಲಯದ ಸರ್ಜಾಪುರ, ಬಾಗಲೂರು ಸಮೀಪದಲ್ಲಿ ಚಿನ್ನದ ಮಳೆ ವದಂತಿ ಹರಡಿದ್ದು ಅಲ್ಲಿನ ಜನ ಸದ್ಯ ಚಿನ್ನದ ಹುಡುಕಾಟದಲ್ಲಿ ತೊಡಗಿದ್ದಾರೆ. ಗಿಡ ಗಂಟೆಗಳನ್ನು ಲೆಕ್ಕಿಸದೆ ನೂರಾರು ಜನರು ಬಂಗಾರಕ್ಕಾಗಿ ಮುಗಿಬಿದ್ದಿದ್ದಾರೆ.