ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ “ಮುಸ್ಲಿಮರ ನಿರ್ಮೂಲನೆಗಾಗಿ ನರೇಂದ್ರ ಮೋದಿಯನ್ನು ಗೆಲ್ಲಿಸಿ” ಎಂಬ ಮತಿಗೆಟ್ಟ ಹೇಳಿಕೆಯು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
ಲಖನೌ: ಹತ್ರಾಸ್ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಡೀ ದೇಶಕ್ಕೆ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಮಹಿಳೆಯರನ್ನು ರಕ್ಷಿಸುವ ಕಾರ್ಯವಾಗಬೇಕು ಎನ್ನುವ ಕೂಗೂ ಇಡೀ ದೇಶವ್ಯಾಪಿ ಕೇಳಿ ಬರುತ್ತಿದೆ. ಈ ಮಧ್ಯೆ ಉತ್ತರ ಪ್ರದೇಶದ ಬಿಜೆಪಿ ಮುಖಂಡನೊಬ್ಬ ಹತ್ರಾಸ್ ಅತ್ಯಾಚಾರವನ್ನು ಪ್ರಸ್ತಾಪಿಸಿ ಇಡೀ ಮಹಿಳೆಯರಿಗೆ ಅವಮಾನ ಮಾಡಿದ್ದಾನೆ.
ಉತ್ತರ ಪ್ರದೇಶದ ಬರಾಬಂಕಿಯ ಬಿಜೆಪಿ ಮುಖಂಡ ಬಹದ್ದೂರ್ ಶ್ರೀವಾಸ್ತವ ಈ ರೀತಿಯ ಹೇಳಿಕೆ ನೀಡಿದ್ದು, ಹತ್ರಾಸ್‌ನ 19 ವರ್ಷದ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ನಾಲ್ವರು, ನಿರಪರಾಧಿಗಳು ಎಂದು ಹೇಳಿದ್ದಾನೆ.
ಅಲ್ಲದೆ ಇದಕ್ಕೆಲ್ಲ ಯುವತಿಯ ಮೊಂಡು ತನವೇ ಕಾರಣ. ಆಕೆ ದಾರಿ ತಪ್ಪಿದ್ದಾಳೆ ಎನ್ನುವ ದಾಟಿಯಲ್ಲಿ ಈ ಬಿಜೆಪಿ ಮುಖಂಡ ಮಾತನಾಡಿದ್ದಾನೆ. ಈ ಬಗ್ಗೆ ವಿಡಿಯೋ ಕೂಡ ಹರಿದಾಡುತ್ತಿದೆ. ” ಸಾವನಪ್ಪಿರುವ ಯುವತಿ ಹಾಗೂ ಆರೋಪಿ ನಡುವೆ ಸಂಬಂಧವಿತ್ತು. ಈ ಹಿನ್ನೆಲೆ ಆಕೆ ಆರೋಪಿಯನ್ನು ಗದ್ದೆಗೆ ಬರಲು ಹೇಳಿದ್ದಾಳೆ. ಆದರೆ ಯುವಕ ಬಲಿಪಶು ಆಗಿದ್ದಾನೆ. ಗದ್ದೆಗೆ ತೆರಳುವ ವೇಳೆ ಯುವತಿ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ”. ಎಂದಿರುವ ಬಿಜೆಪಿ ಮುಖಂಡ ಮಾರ್ಯಾದಾ ಹತ್ಯೆ ನಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾನೆ.
ಅಲ್ಲದೆ ಅಂತಹ(ದಾರಿ ತಪ್ಪಿದ) ಮಹಿಳೆಯರು ಕಬ್ಬು, ಜೋಳ ಮತ್ತು ರಾಗಿ ಹೊಲಗಳಲ್ಲಿ ಅಥವಾ ಪೊದೆಗಳು, ಚರಂಡಿ ಅಥವಾ ಕಾಡಿನಲ್ಲಿ ಸತ್ತು ಬೀಳುತ್ತಿದ್ದಾರೆ. ಭತ್ತ ಅಥವಾ ಗೋಧಿ ಹೊಲಗಳಲ್ಲಿ ಅವರು ಎಂದಿಗೂ ಸತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ ಸದ್ಯ ಜೈಲಿನಲ್ಲಿರುವ ಯುವಕರನ್ನು ಸಿಬಿಐ ಚಾರ್ಚ್‌ಶೀಟ್ ದಾಖಲಿಸುವ ವರೆಗೆ ಬಿಟ್ಟು ಕಳುಹಿಸಬೇಕು ಎಂದು ಹೇಳಿರುವ ಬಿಜೆಪಿ ಮುಖಂಡ, ಈ ಹುಡುಗರು ನಿರಪರಾಧಿಗಳು ಎಂದು ನಾನು ಖಾತರಿಯೊಂದಿಗೆ ಹೇಳಬಲ್ಲೆ.ಅವರನ್ನು ಬಿಡುಗಡೆಗೊಳಿಸದಿದ್ದರೆ ಅವರು ಮಾನಸಿಕವಾಗಿ ಕುಗ್ಗಿ ಹೋಗಬಹುದು. ನಾಳೆ ಏನಾದರು ಅವರಿಗೆ ಸಮಸ್ಯೆಯಾದರೆ ಅವರ ಕುಟುಂಬದ ಜವಾಬ್ಧಾರಿ ಯಾರು ಹೊರುತ್ತಾರೆ. ಅವರಿಗೆ ಸರಕಾರ ಪರಿಹಾರ ನೀಡುತ್ತಾ? ಎಂದು ಪ್ರಶ್ನಿಸಿದ್ದಾರೆ.
ಸದ್ಯ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ, ಅವರು ಯಾವ ಪಕ್ಷದ ನಾಯಕರು ಎಂದು ನಾನು ಕರೆಯಲು ಇಚ್ಚೆ ಪಡುವುದಿಲ್ಲ. ಆದರೆ ಅವರ ಕೆಟ್ಟ ಮನಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ನಾನು ಅವರಿಗೆ ನೋಟಿಸ್ ಕಳುಹಿಸಲಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಈ ಬಹದ್ದೂರ್ ಶ್ರೀವಾಸ್ತವ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ ಎಂದು ತಿಳಿದುಬಂದಿದೆ.
ಈತ ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ “ಮುಸ್ಲಿಮರ ನಿರ್ಮೂಲನೆಗಾಗಿ ನರೇಂದ್ರ ಮೋದಿಯನ್ನು ಗೆಲ್ಲಿಸಿ” ಎಂದು ವಿವಾದವೆಬ್ಬಿಸಿದ್ದ. ಈತನ ವಿರುದ್ಧ 44 ಕ್ರಿಮಿನಲ್ ಕೇಸ್‌ಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.