janadhvani

Kannada Online News Paper

ಹತ್ರಾಸ್ ಪ್ರಕರಣ: ಸಾಕ್ಷಿಗಳ ರಕ್ಷಣೆ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಬೇಕು- ಸುಪ್ರೀಂಕೋರ್ಟ್

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿರುವ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಗಾಯಗಳಿಂದಾಗಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯನ್ನು ರಕ್ಷಿಸಲು ಕೈಗೊಂಡ ಕ್ರಮಗಳ ಕುರಿತ ಗುರುವಾರದೊಳಗೆ ತಿಳಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ,ರಾಜಕೀಯ ಉದ್ದೇಶಗಳೊಂದಿಗೆ ಈ ಪ್ರಕರಣದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ಸಿಬಿಐ ತನಿಖೆಗೆ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಒಲವು ವ್ಯಕ್ತಪಡಿಸಿದ ನಂತರ ಸುಪ್ರೀಂಕೋರ್ಟ್ ಈ ರೀತಿಯ ತೀರ್ಪು ಸೂಚನೆ ನೀಡಿದೆ.ಈ ಘಟನೆಯನ್ನು ಭಯಾನಕ ಮತ್ತು ಅಸಾಧಾರಣ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯ ಪೀಠ, ಪ್ರಕರಣದ ತನಿಖೆ ಸುಗಮವಾಗಿ ನಡೆಯಲಿದೆ ಎಂದು ಭರವಸೆ ನೀಡಿತು.

ಉತ್ತರ ಪ್ರದೇಶ ಸರ್ಕಾರದ ಪರ ನ್ಯಾಯಾಲಯದಲ್ಲಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹತ್ರಾಸ್ ಪ್ರಕರಣದ ಬಗ್ಗೆ ಹರಡುತ್ತಿರುವ ಅಪ ಪ್ರಚಾರಗಳನ್ನು ನಿಲ್ಲಿಸಬೇಕಾಗಿದೆ. ಯಾವುದೇ ಪಟಭದ್ರ ಹಿತಾಸಕ್ತಿಗಳು ನಕಲಿಯನ್ನು ಸೃಷ್ಟಿಸದಂತೆ ಸಿಬಿಐ ತನಿಖೆ ನಡೆಯಲಿದೆ ಎಂದು ನ್ಯಾಯಾಲಯಕ್ಕೆ ಹೇಳಿದರು.

ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬಹುದು ಎಂದು ಉತ್ತರ ಪ್ರದೇಶ ಸರ್ಕಾರ ಉನ್ನತ ನ್ಯಾಯಾಲಯಕ್ಕೆ ತಿಳಿಸಿದೆ. ಮುಕ್ತ ಹಾಗೂ ನ್ಯಾಯಯುತ ತನಿಖೆ ನಡೆಸಲು ಸಿಬಿಐ ತನಿಖೆ ನಡೆಯಬೇಕು ಎಂದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಯೋಗಿ ಸರ್ಕಾರ ತಿಳಿಸಿತು.

ಜಾತಿ ಸಂಘರ್ಷಕ್ಕೆ ಕಿಚ್ಚು ಹೊತ್ತಿಸುವ ಬಗ್ಗೆಗಿನ ಎಫ್ ಐಆರ್ ಬಗ್ಗೆಯೂ ಸಿಬಿಐ ತನಿಖೆ ನಡೆಯಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಪ್ರದಾಯದಂತೆ ರಾತ್ರಿ ವೇಳೆಯಲ್ಲಿ ಸಂತ್ರಸ್ತೆಯ ಅಂತ್ಯಸಂಸ್ಕಾರ ಮಾಡಿರುವುದಾಗಿ ಯೋಗಿ ಸರ್ಕಾರ ನ್ಯಾಯಾಲಯಕ್ಕೆ ಹೇಳಿದೆ.

ದೊಡ್ಡ ಮಟ್ಟದ ಜಾತಿ ಸಂಘರ್ಷ ಮತ್ತು ಪ್ರತಿಭಟನೆ ನಡೆಯುವ ಸಾಧ್ಯತೆಯಿರುವುದಾಗಿ ಗುಪ್ತಚರ ವರದಿ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಪೋಷಕರ ಮನವೊಲಿಸಿ ರಾತ್ರಿ ವೇಳೆಯಲ್ಲಿ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ನಡೆಸಿರುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.ಸಿಬಿಐ ಅಥವಾ ವಿಶೇಷ ತನಿಖಾ ತಂಡಕ್ಕೆ ಹತ್ರಾಸ್ ಪ್ರಕರಣದ ತನಿಖೆಯನ್ನು ಹಸ್ತಾಂತರಿಸಲು ನಿರ್ದೇಶನಗಳನ್ನು ಕೋರಿ ದುಬೆ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com