ಚೆನ್ನೈ: ಪವಿತ್ರ ‘ಭರತಭೂಮಿ’ (ಭಾರತ) ಈಗ ಅತ್ಯಾಚಾರಿಗಳ ಪಾಪದ ಭೂಮಿಯಾಗಿ ಮಾರ್ಪಟ್ಟಿದೆ. ಇಲ್ಲಿ ಪ್ರತಿ 15 ನಿಮಿಷಕ್ಕೆ ಒಂದು ಅತ್ಯಾಚಾರದ ಹೇಯ ಕೃತ್ಯ ವರದಿಯಾಗುತ್ತಿವೆ ಎಂದು ಮದ್ರಾಸ್ ಹೈಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅಸ್ಸಾಮಿನ ವಲಸೆ ಕಾರ್ಮಿಕ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲ ಎ.ಪಿ.ಸೂರ್ಯಪ್ರಕಾಶಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಬೇಸರ ಹೊರ ಹಾಕಿತು.
”ಭರತಭೂಮಿ ಪುಣ್ಯ ಭೂಮಿ ಎನ್ನುವ ಖ್ಯಾತಿ ಇತ್ತು. ಮೌಲ್ಯಗಳಿಗೆ ಹೆಸರುವಾಸಿಯಾಗಿತ್ತು. ಅಂತಹ ಭೂಮಿ ಈಗ ಅತ್ಯಾಚಾರಿಗಳ ನಾಡಾಗಿ ಬದಲಾಗಿದೆ. ಪ್ರತಿ 15 ನಿಮಿಷಕ್ಕೆ ಒಂದು ಅತ್ಯಾಚಾರದ ಹೇಯ ಕೃತ್ಯ ಇಲ್ಲಿನಡೆಯುತ್ತಿವೆ.
ತಿರುಪ್ಪುರ ಜಿಲ್ಲೆಯಲ್ಲಿ ಅಸ್ಸಾಮಿನ 22 ವರ್ಷದ ವಲಸೆ ಮಹಿಳೆ ಮೇಲೆ ಆರು ಪಾತಕಿಗಳಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದು ಆಘಾತಕಾರಿ” ಎಂದು ಚೆನ್ನೈ ಕೋರ್ಟ್ ಕಳವಳ ವ್ಯಕ್ತಪಡಿಸಿತು.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಗ್ಯಾಂಗ್ ರೇಪ್ ನ ಸಂತ್ರಸ್ತೆಯು ಸೆ.29 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು,ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನೂ ಪೊಲೀಸರೇ ತರಾತುರಿಯಲ್ಲಿ ನೆರವೇರಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸಂತ್ರಸ್ತೆಯ ತಂದೆ ಆಗ್ರಹಿಸಿದ್ದಾರೆ. ಈ ನಡುವೆ ಸಂತ್ರಸ್ತ ಯುವತಿಯ ಊರಿನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಮಾಧ್ಯಮದವರೂ ಸೇರಿದಂತೆ ಎಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿದೆ.