ನವದೆಹಲಿ, ಅ 01 – ದೇಶಾದ್ಯಂತ ಕೋವಿಡ್ ಸೋಂಕಿನ ಸಂಖ್ಯೆ ವೃದ್ಧಿಯಾಗುತ್ತಿದ್ದು, ಚೇತರಿಕೆಯ ಸಂಖ್ಯೆಯೂ ಹೆಚ್ಚಾಗುತ್ತಿದೆ. ಏತನ್ಮಧ್ಯೆ ಅನ್ಲಾಕ್ 5.0 ಜಾರಿಯಾಗಿದ್ದು, ಅಕ್ಟೋಬರ್ 15ರಿಂದ ಕೋವಿಡ್ ನಿರ್ಬಂಧಗಳು ಮತ್ತಷ್ಟು ಸರಾಗಗೊಂಡು ಸಾಮಾನ್ಯ ಸ್ಥಿತಿ ನಿರ್ಮಾಣವಾಗಲಿದೆ.
ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ಪುನಃ ತೆರೆಯಲು ಅವಕಾಶ ನೀಡಿರುವ ಕಾರಣ ಚಟುವಟಿಕೆಗಳು ಚುರುಕುಗೊಳ್ಳುವ ನಿರೀಕ್ಷೆಯಿದೆ. ಆದರೆ, ಕೃಷಿ ಮತ್ತು ಇತರ ಕ್ಷೇತ್ರಗಳಿಗೆ ಸೇರಿದ ತಜ್ಞರ ಪ್ರಕಾರ, ದೇಶದ ಕೆಲವು ಭಾಗಗಳಲ್ಲಿ ಕೊಯ್ದ ಪೈರಿನ ಕೂಳೆ ಸುಡುವಿಕೆ ಏರುತ್ತಿರುವುದರಿಂದ ಕೋವಿಡ್ ಸೋಂಕು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.
ಶಾಲೆಗಳನ್ನು ತೆರೆಯುವ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟುಕೊಟ್ಟಿದೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಕೂಳೆ ಸುಡುವಿಕೆಯ ಆರಂಭಿಕ ಚಿಹ್ನೆಗಳನ್ನು ಸೂಚಿಸುವ ನಾಸಾ ಉಪಗ್ರಹ ಚಿತ್ರಗಳು ನೀಡಿದ್ದು ಸರ್ಕಾರಗಳು ಕೂಡಲೇ ಅತ್ತ ಗಮನವನ್ನು ಹರಿಸಿ ‘ಪರಿಹಾರ ಕ್ರಮಗಳನ್ನು’ ತೆಗೆದುಕೊಳ್ಳಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಪ್ರಾಸಂಗಿಕವಾಗಿ, ಖಾರಿಫ್ ಕೊಯ್ಲು ಮುಗಿದ ಕೆಲವೇ ವಾರಗಳಲ್ಲಿ, ಬಿತ್ತನೆಗಾಗಿ ನೆಲವನ್ನು ಸಿದ್ಧಪಡಿಸಲು ದೇಶದಲ್ಲಿ ಭತ್ತದ ಕೂಳೆ ಸುಡಲು ರೈತರು ಆರಂಭಿಸುತ್ತಾರೆ.
ಇದರಿಂದ ಗಾಳಿಯ ಗುಣಮಟ್ಟ ಕುಸಿಯಲು ಆರಂಭವಾಗುತ್ತದೆ. ಅಕ್ಟೋಬರ್ ನಂತ ಚಳಿಗಾಲದಲ್ಲಿ ಗಾಳಿಯ ಗುಣಮಟ್ಟ ಕಮ್ಮಿಯಾಗುವುದರಿಂದ ಉಸಿರಾಟದ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ವಾಯು ಮಾಲಿನ್ಯವು ಕೋವಿಡ್ -19 ರ ಪರಿಣಾಮವನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.