janadhvani

Kannada Online News Paper

ಕೇಂದ್ರ ಸರ್ಕಾರದ ಹೊಸ ಟ್ರಾಫಿಕ್ ನಿಯಮ – ಇಂದಿನಿಂದ ಜಾರಿ

ನವದೆಹಲಿ, ಅ.1: ಕೇಂದ್ರ ಸರ್ಕಾರ ನೂತನ ಮೋಟಾರು ವಾಹನ ನಿಯಮಾವಳಿ- 1989ಕ್ಕೆ ತಿದ್ದುಪಡಿ ತಂದಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದಾಖಲೆಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದೆ. ಇದರಿಂದಾಗಿ ಇನ್ನುಮುಂದೆ ನೀವು ನಿಮ್ಮ ವಾಹನದಲ್ಲಿ ಆರ್​ಸಿ ಬುಕ್, ಇನ್ಶುರೆನ್ಸ್​, ಲೈಸೆನ್ಸ್​ ಇಟ್ಟುಕೊಂಡು ಓಡಾಡಬೇಕಾಗಿಲ್ಲ. ನೀವು ಆ ಎಲ್ಲ ದಾಖಲೆಗಳನ್ನು ಮನೆಯಲ್ಲೇ ಮರೆತು ಬಂದರೂ ಟ್ರಾಫಿಕ್ ಪೊಲೀಸರು ಶುಲ್ಕ ವಿಧಿಸುವಂತಿಲ್ಲ. ಏಕೆಂದರೆ, ಈ ಎಲ್ಲ ದಾಖಲೆಗಳನ್ನು ನಿಮ್ಮ ಮೊಬೈಲ್​ನಲ್ಲಿಟ್ಟುಕೊಂಡಿದ್ದರೆ ಸಾಕು! ಇಂದಿನಿಂದಲೇ ಈ ನಿಯಮ ಜಾರಿಗೆ ಬರಲಿದೆ.

ಇಂದಿನಿಂದ ದೇಶಾದ್ಯಂತ ಈ ಹೊಸ ಟ್ರಾಫಿಕ್‌ ನಿಯಮಗಳು ಜಾರಿಗೊಳ್ಳಲಿವೆ. ದೇಶಾದ್ಯಂತ ಏಕರೂಪದ ಆರ್​ಸಿ, ಡ್ರೈವಿಂಗ್ ಲೈಸೆನ್ಸ್​ ನೀಡುವ ವಿಧಾನ ಜಾರಿಗೆ ಬರಲಿದೆ. ಇನ್ನುಮುಂದೆ ಆರ್​ಸಿ ಬುಕ್​ಗಳನ್ನು ಕೂಡ ಎಲೆಕ್ಟ್ರಾನಿಕ್ ಕಾರ್ಡ್​ ರೂಪದಲ್ಲಿ ನೀಡಲಾಗುವುದು. ಡ್ರೈವಿಂಗ್ ಲೈಸೆನ್ಸ್​ ಕಾರ್ಡ್​ ಕೂಡ ಡಿಜಿಟಲೀಕರಣಗೊಳ್ಳಲಿದ್ದು, ಇದರಲ್ಲಿ ಮೈಕ್ರೋ ಚಿಪ್ ಇರಲಿದೆ. ವಾಹನ ಸವಾರರು ಚಾಲನಾ ಪರವಾನಿಗೆ ಹಾಗೂ ಆರ್‌ಸಿಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕಾಗುತ್ತದೆ.

ಹೀಗಾಗಿ, ಇನ್ನುಮುಂದೆ ಈ ದಾಖಲೆಗಳನ್ನು ವಾಹನದಲ್ಲಿ ಇಟ್ಟುಕೊಂಡು ಓಡಾಡಬೇಕಾಗಿಲ್ಲ. ಡಿಜಿಟಲೀಕರಣಗೊಂಡ ದಾಖಲೆಗಳನ್ನು ನಿಮ್ಮ ಮೊಬೈಲ್​ನಲ್ಲಿ ಸೇವ್ ಮಾಡಿಟ್ಟುಕೊಂಡರೆ ಸಾಕಾಗುತ್ತದೆ. ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪ್ರತಿಗಳನ್ನು ಕೇಂದ್ರ ಸರಕಾರದ ಆನ್‌ಲೈನ್‌ ಪೋರ್ಟಲ್‌ ಆದ ಎಂ-ಪರಿವಾಹನ್‌ ಅಥವಾ ಡಿಜಿಲಾಕರ್‌ ಆ್ಯಪ್‌ ಗಳಿಗೆ ಅಪ್‌ಲೋಡ್‌ ಮಾಡಬಹುದು. ಅಗತ್ಯ ಸಂದರ್ಭದಲ್ಲಿ ಇವುಗಳನ್ನು ದಾಖಲೆಯಾಗಿ ಬಳಸಿಕೊಳ್ಳಬಹುದು.

ಇಂದಿನಿಂದ ಹೊಸದಾಗಿ ಬರುವ ಡಿಎಲ್‌ ಮತ್ತು ಆರ್‌ಸಿಗಳು ಸ್ಮಾರ್ಟ್‌ ತಂತ್ರಜ್ಞಾನವನ್ನು ಹೊಂದಿರಲಿವೆ. ಹೊಸ ಕಾರ್ಡ್‌ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್‌ ಇರಲಿದ್ದು, ಕ್ಯೂಆರ್‌ ಕೋಡ್‌ ಇರಲಿದೆ. ಈ ಕಾರ್ಡ್‌ ಗಳು ಎಟಿಎಂ ಕಾರ್ಡ್‌ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಡ್ರೈವಿಂಗ್ ಲೈಸೆನ್ಸ್​ನ ಕಾರ್ಡ್​ನಲ್ಲಿರುವ ಚಿಪ್​ನಿಂದಾಗಿ ವಾಹನ ಸವಾರರ ಎಲ್ಲ ಮಾಹಿತಿಗಳನ್ನೂ ಸುಲಭವಾಗಿ ಕಂಡುಹಿಡಿಯಬಹುದು. ಈ ಎಲೆಕ್ಟ್ರಾನಿಕ್ ಕಾರ್ಡ್​ ಮೂಲಕ ವಾಹನ ಸವಾರರ 10 ವರ್ಷದೊಳಗಿನ ವಾಹನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಪಡೆಯಬಹುದು.

error: Content is protected !! Not allowed copy content from janadhvani.com