(ಜನಧ್ವನಿ): ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೀಡಲಾಗುತ್ತಿದ್ದ ಅರಿವು ಸಾಲವನ್ನು ಬಿಡುಗಡೆ ಮಾಡದೇ ವಿಳಂಬವಾಗುತ್ತಿದ್ದು,ಅರಿವು ಲೋನನ್ನು ಅವಲಂಬಿಸಿ ಉನ್ನತ ಶಿಕ್ಷಣವನ್ನು ಆರಂಭಿಸಿರುವ ವಿದ್ಯಾರ್ಥಿಗಳ ಭವಿಷ್ಯ ಗೊಂದಲಕ್ಕೀಡಾಗಿದೆ.
ಸಿಇಟಿ, ನೀಟ್ ಮೂಲಕ ಕಾಲೇಜಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರಿವು ಲೋನಿನ ಭರವಸೆಯೊಂದಿಗೆ ಉನ್ನತ ವ್ಯಾಸಂಗಕ್ಕೆ ಕಾಲಿಡುತ್ತಾರೆ. ಪ್ರಥಮ ವರ್ಷದಲ್ಲಿ ಲೋನ್ ಬಿಡುಗಡೆ ಮಾಡಿ, ಇದೀಗ ಬಿಡುಗಡೆ ಮಾಡದೆ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದೆ.
ಆರಂಭದಲ್ಲೇ ಅರಿವು ಲೋನ್ ಲಭಿಸದಿದ್ದರೆ ಶುಲ್ಕ ಪಾವತಿಸಲು ಸಾಧ್ಯವಿಲ್ಲದ ಉನ್ನತ ಶಿಕ್ಷಣವನ್ನು ನಾವು ಆಯ್ಕೆ ಮಾಡುತ್ತಿರಲಿಲ್ಲ, ಅರಿವು ಲೋನಿನ ಆಧಾರದಲ್ಲಿ ಶಿಕ್ಷಣವನ್ನು ಮುಂದುವರಿಸಲು ಬಯಸಿದ್ದು ಇದೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಪ್ರಥಮ ವರ್ಷವನ್ನು ಪೂರ್ತೀಕರಿಸಿ, ದ್ವಿತೀಯ ವರ್ಷದ ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ತೃತೀಯ ವರ್ಷದ ತರಗತಿಯನ್ನು ಆನ್‌ಲೈನ್ ನಲ್ಲಿ ಮುಂದುವರಿಸಲಾಗುತ್ತಿದೆ. ಆದರೆ ದ್ವಿತೀಯ ವರ್ಷದ ಕಾಲೇಜ್ ಶುಲ್ಕವನ್ನು ಪಾವತಿಸಲು ಅರಿವು ಲೋನನ್ನು ಅವಲಂಬಿಸಿರುವ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ದ್ವಿತೀಯ ಅಂತಿಮ ಪರೀಕ್ಷೆಯನ್ನು ಬರೆಯಲು ಅನುಮತಿಸಲಾಗುವುದಿಲ್ಲ ಎಂದು ಕಾಲೇಜ್ ಆಡಳಿತ ಮಂಡಳಿ ತಿಳಿಸಿರುವುದಾಗಿ ತಿಳಿದು ಬಂದಿದೆ.
ಅರಿವು ಲೋನ್ ಬಿಡುಗಡೆಯಾಗದೆ ಇದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೀಡಾಗಿದ್ದಾರೆ. ಬೆರಳೆಣಿಕೆಯ ವಿದ್ಯಾರ್ಥಿಗಳಿಗೆ ಬಿಡುಗಡೆಯಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳ ಲೋನ್ ವಿಳಂಬಗೊಂಡಿದ್ದರಿಂದ ಶುಲ್ಕ ಪಾವತಿಸಿ ಕಲಿಕೆಯನ್ನು ಮುಂದುವರಿಸಲೋ, ಕಲಿಕೆಯನ್ನು ಮೊಟಕು ಗೊಳಿಸಲೋ ಆಗದೆ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಯನ್ನು ಅನುಭವಿಸುವಂತಾಗಿದೆ.
ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕಲಿಕೆಯು ಅರ್ಧದಲ್ಲಿ ಮೊಟಕುಗೊಳ್ಳದಂತೆ, ಸೂಕ್ತವಾದ ಪರಿಹಾರವನ್ನು ಒದಗಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸಬೇಕಾಗಿದೆ.
ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಅರಿವು ಸಾಲವನ್ನು ಆಧರಿಸಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಹೊರಟ ವಿದ್ಯಾರ್ಥಿಗಳು ಕಂಗಾಲಾಗಲಿದ್ದಾರೆ. ಸರಕಾರ ಮತ್ತು ಅಲ್ಪಸಂಖ್ಯಾತ ಇಲಾಖೆ ಗಮನಹರಿಸುವುದು ಒಳಿತು.