ಬೆಂಗಳೂರು: ಕೋವಿಡ್-19ನಿಂದ ಉದ್ಯೋಗ ಕಳೆದುಕೊಂಡು, ಆರ್ಥಿಕ ಸಂಕಷ್ಟದಿಂದ ನಗರ, ಪಟ್ಟಣಗಳಿಂದ ಹಳ್ಳಿಗಳಿಗೆ ಬರುವ ಕುಟುಂಬಸ್ಥರು ತಮ್ಮ ಮಕ್ಕಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿರುವ ಪ್ರವೃತ್ತಿ ಕಂಡುಬರುತ್ತಿದೆ.ಖಾಸಗಿ ಶಾಲೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಅಕ್ಟೋಬರ್ 10ರ ನಂತರ ಈ ಅಂಕಿಅಂಶ ತಿಳಿದುಬರಲಿದೆ. ರಾಜ್ಯದ 53 ಸಾವಿರ ಸರ್ಕಾರಿ ಶಾಲೆಗಳಲ್ಲಿ ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಕಾಯಕಲ್ಪ ಒದಗಿಸಲಾಗಿದೆ ಎಂದರು.
ಬಾಗಲಕೋಟೆಯ ಬಿಳಗಿಯ ಖಾಸಗಿ ಶಾಲೆಯೊಂದರ ಆಡಳಿತಾಧಿಕಾರಿ ಗೋವಿಂದ್ ಕುಂಚಾಪುರ್ ಹೇಳುವ ಪ್ರಕಾರ, ಕೋವಿಡ್-19 ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡವರು, ಆರ್ಥಿಕ ಸಂಕಷ್ಟ ಎದುರಿಸಿದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ, ಅಲ್ಲಿ ಉಚಿತ ಊಟ, ಯೂನಿಫಾರ್ಮ್, ಪುಸ್ತಕ ಸಿಗುತ್ತಿರುವುದರಿಂದ ಅದಕ್ಕೆ ಆಕರ್ಷಿತರಾಗುತ್ತಾರೆ ಎಂದರು.
ಕೋವಿಡ್-19 ಸಾಂಕ್ರಾಮಿಕ ಮಧ್ಯೆ ಶಾಲೆಗಳು ನಡೆಸಲು ಸಾಧ್ಯವಿಲ್ಲದಿರುವಾಗ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ಶುಲ್ಕ ನೀಡುವುದು ಕಷ್ಟವಾಗುತ್ತದೆ. ಕಳೆದ ವರ್ಷದ ಕಾಲು ಭಾಗ ಶುಲ್ಕವೇ ಇನ್ನೂ ಮಕ್ಕಳಿಂದ ಸಂಗ್ರಹವಾಗಿಲ್ಲ. ಸರ್ಕಾರದ ಆದೇಶದ ಪ್ರಕಾರ, ನಾವು ಪೋಷಕರಿಂದ ಶುಲ್ಕ ಕೊಡಿ ಎಂದು ಒತ್ತಾಯಿಸುವ ಹಾಗೂ ಇಲ್ಲ ಎಂದರು.
ಬಳ್ಳಾರಿಯ ಜವಾಹರ್ ಶಾಲೆಯ ರಿಯಾಝ್ ಎಸ್ ಕೆ, ಇನ್ನೂ ಶಾಲೆಗಳು ಆರಂಭವಾಗಿಲ್ಲದಿರುವುದರಿಂದ ಪೋಷಕರು ನಿಗದಿತ ಶುಲ್ಕ ಪಾವತಿಸಲು ಸಿದ್ಧರಿಲ್ಲ, ಸುಮಾರು 1.5 ಲಕ್ಷ ಮಕ್ಕಳು ಖಾಸಗಿ ಶಾಲೆಯಿಂದ ಹೊರಹೋಗಿದ್ದಾರೆ ಎಂದು ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಶಿ ಕುಮಾರ್ ತಿಳಿಸಿದ್ದಾರೆ.