ಮಂಗಳೂರು,ಸೆ.21: ಕಳೆದ ಎರಡು ದಿನಗಳಿಂದ ಕರಾವಳಿಯಾದ್ಯಂತ ಸುರಿದ ರಣ ಮಳೆ ಇಂದು ಕೊಂಚ ತಗ್ಗಿದೆ. ಭಾರೀ ಮಳೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಮಂಗಳೂರು ಹೊರವಲಯದ ಸುರತ್ಕಲ್, ಇಡ್ಯಾ, ಹೊಸಬೆಟ್ಟು, ದೇಲಂತಬೆಟ್ಟು, ಸೂರಿಂಜೆ, ಚೇಳ್ಯಾರು ಪ್ರದೇಶದಲ್ಲಿ ನೂರಕ್ಕೂ ಮಿಕ್ಕಿದ ಮನೆಗಳು ಜಲಾವೃತಗೊಂಡಿದ್ದು, ಇದೀಗ ನೀರಿನ ಪ್ರಮಾಣ ಕೊಂಚ ಕಡಿಮೆಯಾಗಿದೆ.
ಮುಂಜಾಗೃತಾ ಕ್ರಮವಾಗಿ ಈ ಭಾಗದ ಏಳು ಮನೆ ಮಂದಿಯನ್ನು ಆಗ್ನಿಶಾಮಕ ದಳ ಬೇರೆಡೆಗೆ ಸ್ಥಳಾಂತರಿಸಿದೆ. ಉಳಿದ ಮನೆಗಳು ಜಲಾವೃತಗೊಂಡಿದ್ದರೂ, ಮನೆ ಮಂದಿ ಮಾತ್ರ ಮನೆಯಲ್ಲೇ ಉಳಿದಿದ್ದು, ನೀರು ಕಡಿಮೆಯಾಗುವ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಭಾರೀ ಮಳೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನೇತ್ರಾವತಿ ನದಿ ನೀರು ಉಪ್ಪಿನಂಗಡಿ ಹಾಗೂ ಬಂಟ್ವಾಳದ ಕೆಲವು ಭಾಗಗಳಲ್ಲಿ ಕೃಷಿ ತೋಟಗಳಿಗೂ ನುಗ್ಗಿದೆ.
ಅದೇ ರೀತಿ ಶಾಂಭವಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಕಿನ್ನಿಗೋಳಿ, ಮೂಡಬಿದಿರೆ ಭಾಗದಲ್ಲಿ ನದಿ ನೀರು ಮನೆ ಹಾಗೂ ಕೃಷಿ ತೋಟಗಳಿಗೆ ನುಗ್ಗಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಇಂದು ಕೂಡಾ ಮುಳುಗಡೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಕರಾವಳಿಯಲ್ಲಿ ಇಂದು ಹಾಗೂ ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಎರಡೂ ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ.
ಈ ಹಿನ್ನಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನೂ ಈಗಾಗಲೇ ನೀಡಲಾಗಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಗುಡ್ಡ ಜರಿತದ ಸಣ್ಣ ಪುಟ್ಟ ಘಟನೆಗಳು ಸಂಭವಿಸಿದ್ದು, ಮಳೆಯಿಂದಾಗಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಉತ್ತರ ಕನ್ನಡ ಜಿಲ್ಲೆ ಕರಾವಳಿಯಲ್ಲಿ ಮುಂದುವರೆದ ಮಳೆಇನ್ನು, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿನ್ನೆ ಮಧ್ಯಾಹ್ನದಿಂದ ಸುರಿಯುತ್ತಿರುವ ಭಾರೀ ಮಳೆ ಇಂದು ಕೂಡಾ ಮುಂದುವರೆದಿದ್ದು ಜಿಲ್ಲೆಯಲ್ಲಿ ಸಮಸ್ಯೆ ಉಲ್ಭಣಗೊಂಡಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಮತ್ತು ಭಾರೀ ಗಾಳಿ ಮಳೆಗೆ ಬೆಚ್ಚಿ ಬಿದ್ದ ಬೆಸ್ತರು ತಮ್ಮ ತಮ್ಮ ಬೋಟ್ ಗಳನ್ನ ಕಾರವಾರ ಬಂದರು ಪ್ರದೇಶದಲ್ಲಿ ಲಂಗರು ಹಾಕಿಸಿದ್ದಾರೆ. ಮಂಗಳೂರು, ಮಲ್ಪೆ ಹಾಗೂ ಹೊರ ರಾಜ್ಯದ ಮೀನುಗಾರಿಕಾ ಬೋಟ್ ಗಳು ಆಳ ಸಮುದ್ರ ಮೀನುಗಾರಿಕೆ ಮಾಡಲಾಗದೆ ಕಾರವಾರ ಬಂದರು ತಲುಪಿವೆ.
ಇನ್ನು ನಾಲ್ಕೈದು ಮೀನುಗಾರಿಕಾ ಬೋಟ್ ಗಳು ಆಂಕರ್ ತುಂಡಾಗಿ ದಡಕ್ಕೆ ಬಂದು ಅಪ್ಪಳಿಸಿ ಸಾಕಷ್ಟು ಹಾನಿ ಸಂಭವಿಸಿದೆ. ಇನ್ನು ಸಮುದ್ರದಲ್ಲಿ ಅಬ್ಬರದ ಆಳೆತ್ತರದ ಅಲೆಗಳು ತೀರಕ್ಕೆ ಬಂದು ಅಪ್ಪಳಿಸಿದ್ರಿಂದ ಸಮುದ್ರದ ದಂಡೆಯಲ್ಲಿರುವ ಸಾಕಷ್ಟು ಮೀನುಗಾರಿಕಾ ಶೆಡ್ ಗಳನ್ನ ಅಲೆಗಳು ಆಪೋಷನ ತೆಗದುಕೊಂಡಿದೆ. ಇಲ್ಲಿನ ನಾಡ ದೋಣಿ ಅಲೆಗಳ ರಭಸಕ್ಕೆ ಒಡೆದು ಹೋಗಿದ್ದು ಲಕ್ಷಾಂತರ ರೂ ಹಾನಿ ಆಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಮುಂದುವರೆದಿದ್ದರಿಂದ ನದಿ ಹಳ್ಳ ಕೊಳ್ಳಗಳು ಭರ್ತಿ ಆಗಿವೆ. ಸಮುದ್ರ ಪ್ರಕ್ಷುಬ್ಧವಾಗಿದ್ದು ಇನ್ನು ಮಳೆ ಬಿರುಸಾಗುವ ಲಕ್ಷಣ ಇದ್ದು ಸಾಕಷ್ಟು ಸಮಸ್ಯೆ ಎದುರಾಗುವ ಲಕ್ಷಣ ಇದ್ದು ಜಿಲ್ಲೆಯ ಜನ ಆತಂಕಿತರಾಗಿದ್ದಾರೆ.