ಚಾಮರಾಜನಗರ, ಸೆ.12: ಡ್ರಗ್ಸ್ ಪಿಡುಗಿನಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಶಿಕ್ಷಣ ಇಲಾಖೆ ಹಾಗೂ ಗೃಹ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಎರಡೂ ಇಲಾಖೆಗಳಿಂದ ಒಟ್ಟಾಗಿ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ದ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ಈಗಾಗಲೇ ಈ ಬಗ್ಗೆ ಎಲ್ಲಾ ಬಿಇಓಗಳಿಗೆ ಸೂಚನೆ ನೀಡಲಾಗಿದೆ. ನಿಮ್ಮ ವ್ಯಾಪ್ತಿಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಆರೋಗ್ಯಾಧಿಕಾರಿಗಳೊಂದಿಗೆ ಸೇರಿ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ದ ಅರಿವು ಮೂಡಿಸಿ ಡ್ರಗ್ಸ್ ಗೆ ಬಲಿಯಾಗದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಸಲು ಕಾರ್ಯಕ್ರಮ ನಡೆಸಬೇಕೆಂದು ತಿಳಿಸಲಾಗಿದೆ ಎಂದರು.
ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವ ವಿಚಾರದಲ್ಲಿ ಸಿದ್ದರಾಮಯ್ಯಗೆ ನಾನು ಸಂಪೂರ್ಣ ಭರವಸೆ ಕೊಡುತ್ತೇನೆ. ಸರ್ಕಾರ ಬಹಳ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದು, ಪೊಲೀಸರ ತನಿಖೆಗೆ ಮುಕ್ತ ಹಾಗೂ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಡ್ರಗ್ಸ್ ದಂಧೆ ವಿರುದ್ದದ ತನಿಖೆ ಹಾದಿತಪ್ಪುತ್ತಿದೆ ಎಂಬ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು, ತನಿಖೆ ಸರಿಯಾದ ದಾರಿಯಲ್ಲೇ ಹೋಗಬೇಕು, ಮೂಲ ಪತ್ತೆ ಹಚ್ಚಬೇಕು ಎಂದು ಸರ್ಕಾರ ನಿರ್ಧರಿಸಿದ್ದು ತನಿಖೆ ಹಾದಿ ತಪ್ಪಲು ಅವಕಾಶ ನೀಡುವುದಿಲ್ಲ ಎಂದರು.
ಶಾಸಕ ಜಮೀರ ವಿರುದ್ದ ಡ್ರಗ್ಸ್ ಮಾಫಿಯಾ ಆರೋಪ ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ದಂಧೆ ವಿಚಾರದಲ್ಲಿ ರಾಜಕೀಯ ಸಲ್ಲದು. ಡ್ರಗ್ಸ್ ಪಿಡುಗಿನ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇಡೀ ಯುವಜನಾಂಗವನ್ನೇ ನಾಶ ಮಾಡುವ ದರಿದ್ರ ದಂಧೆ ಇದು. ರಾಜಕೀಯ ಮೀರಿ ಹಾಗೂ ಪಕ್ಷಾತೀತವಾಗಿ ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದರು. ಒಗ್ಗಟ್ಟಿನಿಂದ ಎದುರಿಸದಿದ್ದರೇ ಡ್ರಗ್ಸ್ ಪಿಡುಗು ಭಸ್ಮಾಸುರನಾಗಿ ಎಲ್ಲರನ್ನೂ ಸುಡಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.