janadhvani

Kannada Online News Paper

ಮಂಗಳೂರಿನ ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಶಿಫ್ಟ್- ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ

ಮಂಗಳೂರು,ಸೆ.10: ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ಮತ್ತೆ ಮಲತಾಯಿ ಧೋರಣೆ ತೋರಿದೆ. ಮಂಗಳೂರಿನಲ್ಲಿರುವ ಆದಾಯ ತೆರಿಗೆ ಪ್ರಧಾನ ಕಚೇರಿಯನ್ನು ಗೋವಾ ರಾಜ್ಯಕ್ಕೆ ಶಿಫ್ಟ್ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದೆ. ಹೀಗಾದಲ್ಲಿ ಮಂಗಳೂರಿನ ನಾಲ್ಕೂವರೆ ಲಕ್ಷ ತೆರಿಗೆದಾರರು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ. ಪ್ರಸ್ತುತ ಕರಾವಳಿಯ ತೆರಿಗೆದಾರರು ಆಕ್ಷೇಪಿತ ತೆರಿಗೆ ಪರಿಷ್ಕರಣೆ ಮತ್ತು ಇತರ ತೆರಿಗೆ ಸಂಬಂಧಿ ಕೆಲಸಗಳಿಗಾಗಿ ಈ ಕಚೇರಿಯನ್ನು ಆಶ್ರಯಿಸಿದ್ದಾರೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಈ ಕಚೇರಿ ಒಳಗೊಂಡಿದೆ. ಕರಾವಳಿಯಲ್ಲಿ ದೊಡ್ಡ ಮಟ್ಟದ ವ್ಯಾಪಾರ ಕೇಂದ್ರಗಳು, ಕೈಗಾರಿಕೆಗಳಿದ್ದು, ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿವೆ. ಬೆಂಗಳೂರಿನ ಅನಂತರ ಉದ್ಯಮ ಸ್ಥಾಪನೆಗೆ ಉತ್ತಮ ವಾತಾವರಣ ಈ ಜಿಲ್ಲೆಗಳು ಹೊಂದಿವೆ. ಜತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 4 ಲಕ್ಷ ಮಂದಿ ತೆರಿಗೆದಾರರು ವಾರ್ಷಿಕ 3,300 ಕೋ.ರೂ. ತೆರಿಗೆ ಪಾವತಿಸುತ್ತಿದ್ದಾರೆ.

ರಾಜ್ಯದಲ್ಲಿ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನ ಬೆಂಗಳೂರಿಗೆ, ದ್ವಿತೀಯ ಸ್ಥಾನ ಮಂಗಳೂರಿಗಿದ್ದರೆ, ಹುಬ್ಬಳ್ಳಿ ತೃತೀಯ ಸ್ಥಾನದಲ್ಲಿದೆ. ಸದ್ಯ ಹುಬ್ಬಳ್ಳಿಯ ಕಚೇರಿಯನ್ನು ಕೂಡ ವಿಲೀನ ಮಾಡಲು ಹೊರಟಿದ್ದರು. ಆದ್ರೆ ಹುಬ್ಬಳ್ಳಿ ಸಂಸದ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಅದನ್ನು ಅಲ್ಲೇ ಉಳಿಸಿಕೊಳ್ಳಲಾಗಿದೆ. ಪ್ರಮುಖ ತೆರಿಗೆಗಳು, ಕುಂದುಕೊರತೆ ಮತ್ತು ಅರ್ಜಿ ವಿಲೇವಾರಿಗಳಾದ 119, 220, 263, 264, ಬಡ್ಡಿ ಮನ್ನಾ, ಟಿಡಿಎಸ್‌ ವಿನಾಯಿತಿ ಪ್ರಮಾಣಪತ್ರ ಗಳಲ್ಲಿ ಪಿಸಿಐಟಿ ಕಚೇರಿ ಮುಖ್ಯ ಪಾತ್ರ ವಹಿಸುತ್ತದೆ. ಕರಾವಳಿಯಲ್ಲಿ ಸಹಕಾರಿ ಮತ್ತು ಶೆಡ್ನೂಲ್ಡ್‌ ಬ್ಯಾಂಕ್‌ಗಳು ಹೆಚ್ಚಿದ್ದು, ಮೌಲ್ಯಮಾಪನದಲ್ಲಿ ತೆರಿಗೆ ಆಕ್ಷೇಪ ಬಂದಾಗ ಪಿಸಿಐಟಿ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಬೃಹತ್‌ ಕೈಗಾರಿಕೆಗಳು, ಉನ್ನತ ಸಂಸ್ಥೆಗಳ ಕಚೇರಿಗಳು ಇಲ್ಲಿದ್ದು, ದೂರದ ಗೋವಾಕ್ಕೆ ಹೋಗುವುದು ಕಷ್ಟಸಾಧ್ಯ. ಅಷ್ಟಲ್ಲದೆ ಈ ಐಟಿ ಸಮಸ್ಯೆಗಳು ಒಂದೇ ಬಾರಿಗೆ ಪರಿಹಾರವಾಗದೆ, ಆಗಾಗ್ಗೆ ಹೋಗುವುದರಿಂದ ಸ್ಥಳೀಯ ತೆರಿಗೆದಾರರ ಸಮಯ ಮತ್ತು ಹಣ ಎರಡೂ ವ್ಯರ್ಥವಾಗಲಿವೆ.

ಇನ್ನು ಈ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಕರಾವಳಿ ಭಾಗದ ಸಂಸದರಾದ ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗ್ಡೆ ಈ ಬಗ್ಗೆ ಚಕಾರ ಎತ್ತದೆ ಕಚೇರಿ ವಿಲೀನವಾಗದಂತೆ ತಡೆದಿಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.

ತೆರಿಗೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿರುವುದರಿಂದ ವಾರ್ಷಿಕ ರಿಟರ್ನ್ಸ್ ಫೈಲ್‌ ಮಾಡದವರಿಗೆ ನೋಟಿಸ್‌ ಹೆಚ್ಚುತ್ತಿದೆ. ಹಲವರು ಮಾಹಿತಿಯ ಕೊರತೆಯಿಂದ ರಿಟರ್ನ್ಸ್​​ ಫೈ ಲ್‌ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಂಗಳೂರಿನ ಪಿಸಿಐಟಿ ಕಚೇರಿ ಇಲ್ಲಿಯೇ ಇದ್ದರೆ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯವಾಗುತ್ತದೆ ಎಂಬುದು ಲೆಕ್ಕ ಪರಿಶೋಧಕರ ಅಭಿಪ್ರಾಯ. ಇನ್ನು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರೂ ಪ್ರತಿಕ್ರಿಯೆ ನೀಡಿದ್ದು,ಈ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆಯಾಗಿದೆ. ಪಿಸಿಐಟಿ ಯನ್ನು ಮಂಗಳೂರಿನಲ್ಲಿ ಉಳಿಸಿಕೊಡುವಂತೆ ಮನವಿ ಮಾಡಲಾಗಿದೆ. ಇನ್ನು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವೆಲ್ಲಾ ಮನವರಿಕೆ ಮಾಡಬೇಕೊ ಅದನ್ನೆಲ್ಲಾ ಮಾಡಲಾಗುವುದು ಅಂತಾ ಹೇಳಿದ್ದಾರೆ.

ಇನ್ನು ನಿರ್ಮಲಾ ಸೀತರಾಮನ್ ಕರ್ನಾಟಕದಿಂದ ಆರಿಸಿ ಹೋಗಿ ಕರ್ನಾಟಕಕ್ಕೆ ವಂಚನೆ ಮಾಡುತ್ತಿದ್ದಾರೆ ಅಂತಾ ಕಾಂಗ್ರೆಸ್ ಆರೋಪ ಮಾಡಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಬಗ್ಗೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನ ಪಿಸಿಐಟಿ ಕಚೇರಿಯನ್ನು ಗೋವಾ ದೊಂದಿಗೆ ವಿಲೀನ ಮಾಡದೆ ಇರುವುದು ಉತ್ತಮ. ಅವಿಭಜಿತ ಜಿಲ್ಲೆಯಲ್ಲಿ 4 ಲಕ್ಷ ಜನರು ತೆರಿಗೆ ಪಾವತಿಸುತ್ತಿದ್ದು, ಆಡಿಟ್‌ ಆಕ್ಷೇಪಗಳಿಗೆ ಗೋವಾಕ್ಕೆ ತೆರಳುವುದು ಕಷ್ಟಸಾಧ್ಯ. ಈ ಕಚೇರಿ ಇಲ್ಲೇ ಉಳಿಯಬೇಕು ಎನ್ನುವುದು ಉತ್ತಮ ತೆರಿಗೆದಾರರ ಒತ್ತಾಯವಾಗಿದೆ.

error: Content is protected !! Not allowed copy content from janadhvani.com