ಬೆಂಗಳೂರು,ಆ. 26: ರಾಜ್ಯ ಬಿಜೆಪಿ ಸರ್ಕಾರ ಇತ್ತೀಚೆಗೆ ಶಾಲಾ-ಕಾಲೇಜು ಪಠ್ಯದಿಂದ ಟಿಪ್ಪು ಸುಲ್ತಾನ್ ಕುರಿತು ಪಾಠಕ್ರಮಗಳನ್ನು ತೆಗೆಯಲು ಮುಂದಾಗಿದೆ. ಆದರೆ, ಇದೇ ವೇಳೆ ಸ್ವತಃ ಬಿಜೆಪಿ ನಾಯಕ ಹೆಚ್. ವಿಶ್ವನಾಥ್, “ಟಿಪ್ಪು ಓರ್ವ ಅಪ್ರತಿಮ ದೇಶಭಕ್ತ” ಎಂದು ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮತ್ತೆ ಟಿಪ್ಪು ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ. ಅವರು ಯಾವುದೇ ಪಕ್ಷ, ಜಾತಿ ಧರ್ಮಕ್ಕೆ ಸೇರಿದವರಲ್ಲ ಎಂದಿದ್ದಾರೆ.ಟಿಪ್ಪುವನ್ನು ಯಾವುದೇ ಪಕ್ಷಕ್ಕೆ ಜಾತಿ ಧರ್ಮಕ್ಕೆ ಸೇರಿಸಿ ಸಣ್ಣವನು ಮಾಡಬಾರದು ಎಂದಿರುವ ಹಳ್ಳಿ ಹಳ್ಳಿ ಎಚ್. ವಿಶ್ವನಾಥ್ ಪಠ್ಯ ಪುಸ್ತಕದಿಂದ ಕೈಬಿಟ್ಟಿಲ್ಲ ಐದನೇ ತರಗತಿಯ ಬದಲಾಗಿ ಏಳನೇ ತರಗತಿಯ ಪಠ್ಯಕ್ಕೆ ಅಳವಡಿಸಲಾಗಿದೆ ಎಂದರು.
ಟಿಪ್ಪು ಸುಲ್ತಾನ್ ಮತಾಂಧ, ಕ್ರೂರಿ ಎಂದು ಬಿಜೆಪಿ ಮುಖಂಡರು ಒಂದು ಕಡೆಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿದೆ. ಈ ನಡುವೆ ಜೆಡಿಎಸ್ನಿಂದ ವಲಸೆ ಬಂದ ಎಚ್ ವಿಶ್ವನಾಥ್ ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ ಎಂದು ಹಾಡಿ ಹೊಗಳಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಈಶ್ವರ ಖಂಡ್ರೆ, “ವಿಶ್ವನಾಥ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಬಿಜೆಪಿಯವರು ಸತ್ಯ ಮರೆಮಾಚುವ ಕೆಲಸವನ್ನು ಮಾಡುತ್ತಿದ್ದಾರೆ. ಟಿಪ್ಪು ಒಬ್ಬ ದೇಶ ಭಕ್ತ , ವೀರ ಸೇನಾನಿ. ಟಿಪ್ಪು ನಿರ್ಮಾಣ ಮಾಡಿರುವ ದೇವಸ್ಥಾನ ಮತ್ತು ಕೋಟೆಗಳನ್ನುಗಳನ್ನು ನಾಶಮಾಡಲು ಆಗುತ್ತಾ? ಬ್ರಿಟೀಷರ ವಿರುದ್ಧ ಅವರು ಹೋರಾಡಿದ್ದನ್ನು ಸುಳ್ಳು ಎಂದು ಹೇಳಲಾಗುತ್ತದೆಯೇ? ಬಿಜೆಪಿ ನಾಯಕರು ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ, ವಿಶ್ವನಾಥ್ ಸತ್ಯವನ್ನು ಹೇಳಿದ್ದಾರೆ ಹಾಗಾಗಿ ನಾನು ವಿಶ್ವನಾಥ್ ಹೇಳಿಕೆಯನ್ನು ಬೆಂಬಲಿಸುವೆ” ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಡಿ.ಜೆ. ಹಳ್ಳಿ ಗಲಭೆ ಪ್ರಕರಣವನ್ನೂ ಉಲ್ಲೇಖಿಸಿರುವ ಈಶ್ವರ ಖಂಡ್ರೆ, “ಈ ಗಲಭೆಯ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಗಲಾಟೆಯಿಂದ ಯಾರಿಗೆ ಲಾಭವಾಗುತ್ತದೆ ಎಂಬುದರ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಎಸ್ ಡಿಪಿಐ ಬಿಜೆಪಿಯ ಒಂದು ಬಿ- ಟೀಂನಂತೆ ವರ್ತಿಸುತ್ತಿದೆ. ಹೀಗಾಗಿ ಈ ಗಲಭೆಯ ತನಿಖೆ ನಡೆದು ಸತ್ಯ ಹೊರಬರಬೇಕು” ಎಂದು ಒತ್ತಾಯಿಸಿದ್ದಾರೆ.






