ಮಂಗಳೂರು:ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ದೈನಂದಿನ ಚಟುವಟಿಕೆಗಳಿಗೆ ಪ್ರತಿದಿನ ಸಂಚರಿಸುವ ಸಾರ್ವಜನಿಕರು ಸ್ಥಳೀಯ ಗ್ರಾ.ಪಂ ವತಿಯಿಂದ ಮಾಸಿಕ ಪಾಸ್ ಪಡೆದು ಪಾಸನ್ನು ಚೆಕ್‌ಪೋಸ್ಟ್‌ಗಳಲ್ಲಿ ತಮ್ಮ ಮಾಹಿತಿ ದಾಖಲಿಸಿ, ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿದಿನ ವೈದ್ಯಕೀಯ ಸ್ಕ್ರೀನಿಂಗ್ ಹಾಗೂ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಯಲು ಇಚ್ಛಿಸುವ ಸಾರ್ವಜನಿಕರು ಕಡ್ಡಾಯವಾಗಿ ಸೇವಾ ಸಿಂಧು ವೆಬ್ ಪೋರ್ಟಲ್‌ನಲ್ಲಿ ಪಾಸ್ ಪಡೆದು ತಲಪಾಡಿ ಅಥವಾ ಜಾಲ್ಸೂರು ಚೆಕ್‌ಪೋಸ್ಟ್ ಮುಖಾಂತರವೇ ಸಂಚರಿಸಬೇಕು. ಕರ್ನಾಟಕ ಸರಕಾರದ ಕೊರೊನಾ ಕ್ವಾರಂಟೈನ್ ಮಾರ್ಗಸೂಚಿಗೆ ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಇನ್ನೊಂದೆಡೆ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಿರುವ ದಕ್ಷಿಣ ಕನ್ನಡದ ಗಡಿ ರಸ್ತೆಗಳನ್ನು ತೆರವುಗೊಳಿಸಲಾಗಿದೆ. ಗಡಿಯಲ್ಲಿರುವ ಪೊಲೀಸರು ವಾಹನಗಳ ನಂಬ್ರವನ್ನು ಬರೆದು ವಾಹನಗಳನ್ನು ಬಿಡುತ್ತಿದ್ದಾರೆ. ಆದರೆ ಕೇರಳ ಪೊಲೀಸರು ಎಲ್ಲಾ ಗಡಿ ರಸ್ತೆಗಳಲ್ಲಿ ಬ್ಯಾರಿಕೇಟ್ ಇಟ್ಟುಕೊಂಡು ಕಾವಲು ಕಾಯುತ್ತಿದ್ದಾರೆ. ಸಾರಡ್ಕ ಗಡಿಯಲ್ಲಿ ಸ್ಥಳೀಯ ವಾಹನಗಳು ಇದೀಗ ಸಂಚಾರ ನಡೆಸುತ್ತಿದೆ. ಆದರೆ ಕಾಟುಕುಕ್ಕೆ ಬಳಿ ಕೇರಳ ಪೊಲೀಸರು ವಾಹನಗಳಿಗೆ ನಿಯಂತ್ರಣ ಹೇರಿದ್ದಾರೆ. ಕಾಸರಗೋಡು ಜಿಲ್ಲಾಡಳಿತ ಎಲ್ಲಾಗಡಿ ರಸ್ತೆಗಳಲ್ಲಿ ಪೊಲೀಸರ ಕಾವಲು ಏರ್ಪಡಿಸಿದ್ದಾರೆ. ಸ್ವರ್ಗ ಗಡಿ ಸಹಿತ ಎಲ್ಲ ಕಡೆಯೂ ಕೇರಳ ಪೊಲೀಸರನ್ನು ನಿಯೋಜಿಸಲಾಗಿದೆ. ಸಾರಡ್ಕ ಚೆಕ್‌ಪೋಸ್ಟ್ ತೆರೆಯುವ ಮೂಲಕ ಸ್ಥಳೀಯ ನಿವಾಸಿಗಳು ನಿರಾಳವಾಗಿದ್ದಾರೆ.