janadhvani

Kannada Online News Paper

ಸಾರ್ವಜನಿಕವಾಗಿ ಬೆತ್ತಲಾದ ಕರ್ನಾಟಕದ ಇಬ್ಬರು ಮಹಾನ್ ಸುಳ್ಳುಕೋರರು…!!!

https://m.facebook.com/story.php?story_fbid=10214949435004298&id=1681227434

“ನಿಮ್ಮ ಗಂಡನ ಮೇಲೆ ನಿಮಗೆ ಅನುಮಾನವೇ? ಆತ ಎಲ್ಲಿ ಹೋಗ್ತಾನೆ ಬರ‌್ತಾನೆ ಅನ್ನೋದನ್ನು ನೀವು ಟ್ರಾಕ್ ಮಾಡಬೇಕೆ? ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ನಿಮ್ಮ ಸಂಸಾರ ಉಳಿಸಿಕೊಳ್ಳಿ” ಎಂದು ಹೇಳುವ ಜಾಹೀರಾತನ್ನು ಇತ್ತೀಚಿಗೆ ನೋಡಿದೆ. ಒಂದುಕ್ಷಣಕ್ಕೆ ಇವರು ಸಂಸಾರ ಉಳಿಸೋರಾ? ಒಡೆಯೋರಾ ಅನ್ನಿಸಿಬಿಟ್ಟಿತು.

ಹಾಗೆ ನೋಡಿದರೆ ಈಗ ಈ ಅಪ್ಲಿಕೇಷನ್ ಕೂಡ ಬೇಕಾಗೇ ಇಲ್ಲ. ಒಂದು ನಿಮಿಷ ನಿಮ್ಮ ಮೊಬೈಲ್ ಕೊಟ್ಟಿರಿ ಎಂದು ಗಂಡನಿಂದ ಈಸ್ಕೊಂಡು ಗೂಗಲ್ ಸೇವ್ ಮಾಡಿಕೊಂಡಿರುವ ರೀಸೆಂಟ್ಲಿ‌ ವಿಜಿಡೆಡ್ ಪ್ಲೇಸ್ ಗಳನ್ನು ನೋಡಿದರೆ ಹೆಂಡತಿಗೆ ಗಂಡನ ಓಡಾಟದ ಮಾಹಿತಿಗಳು ಸಿಕ್ಕಿಬಿಡುತ್ತವೆ. ಮೈಸೂರಿಗೆ ಹೋಗಿ ಬಂದಿದ್ದರೆ ಅವನು ಮೈಸೂರಿಗೇ ಹೋಗಿದ್ದೆ ಎಂದು ಹೇಳಬೇಕು. ಅಪ್ಪಿತಪ್ಪಿ ಮೈಸೂರಿಗೆ ಹೋಗ್ತೀನಿ ಅಂತ ಹೇಳಿ ಮಂಗಳೂರಿಗೆ ಹೋಗಿ ಬಂದಿದ್ದರೆ ಹೆಂಡತಿ ಗಂಡನದೇ ಫೋನಿನ ದಾಖಲೆ ಮುಂದಿಟ್ಟು, ನೀನು ಮೊನ್ನೆ ಸಂಜೆ ಸೇಂಟ್ ಮೇರೀಸ್ ಐಲ್ಯಾಂಡ್ ಬೀಚ್ ನಲ್ಲಿದ್ದೆ, ಆಮೇಲೆ ರಾತ್ರಿ ಬಲ್ಮಠ ರಸ್ತೆಯ ತೇಜ್ ಟವರ್ ನಲ್ಲಿರೋ ಪಲ್ಖಿ ರೆಸ್ಟಾರೆಂಟ್ ನಲ್ಲಿ ಊಟ ಮಾಡಿದ್ದೀಯ, ಯಾಕೆ ಸುಳ್ಳು ಬೊಗಳುತ್ತೀಯಾ ಎಂದು ಜನ್ಮ ಜಾಲಾಡಬಹುದು. ಗೂಗಲ್ ಹೇಳದ ಒಂದು ಮಾಹಿತಿಯನ್ನು ಆಕೆ ಕೇಳೇಕೇಳುತ್ತಾಳೆ: ‘ಬೀಚಲ್ಲಿ, ರೆಸ್ಟಾರೆಂಟ್ ನಲ್ಲಿ ನಿನ್ನ ಜತೆ ಇದ್ದವಳು ಯಾರು ಹೇಳು? ‘

ಡಿಜಿಟಲ್ ಪ್ರೈವೆಸಿ ಅನ್ನೋದೂ ಕಾಲು ಮುರಿದು ಬಿದ್ದು ಯಾವುದೋ ಕಾಲವಾಯಿತು. ಸುಳ್ಳುಗಳು ಹೇಳಿ ಬಚಾವಾಗುವುದು ಕಷ್ಟ. ನೀವು ಬರೆದಿದ್ದು, ಲೈವ್ ಬಂದು ಮಾತಾಡಿದ್ದು, ರೀಡಿಂಗ್ ದಿಸ್, ವಾಚಿಂಗ್ ದಟ್ ಎಂದಿದ್ದೆಲ್ಲ ಈಗ ಡಿಜಿಟಲ್ ದಾಖಲೆ. ಎಂಟು ವರ್ಷದ ಹಿಂದೆ ಬಾಯ್ ಫ್ರೆಂಡ್ ಜತೆ ಜಗಳ ಆಡಿಕೊಂಡು ಫೀಲಿಂಗ್ ಅಲೋನ್ ಎಂದು ಹಾಕಿದ ಸ್ಟೇಟಸ್ ಕೂಡ ಒಂದು ದಾಖಲೆ. ಇಲ್ವೇ ಇಲ್ಲ, ನಂಗೆ ಆಗ ಲವ್ವೇ ಆಗಿರಲಿಲ್ಲ ಎಂದರೆ ಆ ಒಂದೇ ಒಂದು ಸ್ಕ್ರೀನ್ ಶಾಟ್ ಸಾಕ್ಷ್ಯ ಹೇಳುತ್ತದೆ‌.

ಕರ್ನಾಟಕ ಇತ್ತೀಚಿಗೆ ಕಂಡ ಇಬ್ಬರು ಮಹಾಸುಳ್ಳುಗಾರರ ಬಗ್ಗೆ ನಾವೆಲ್ಲ ಬಿಸಿಬಿಸಿಯಾದ ಚರ್ಚೆ, ಟ್ರಾಲ್ ಗಳನ್ನು ಗಮನಿಸುತ್ತಿದ್ದೇವೆ. ಒಬ್ಬಾತ ಚಕ್ರವರ್ತಿ ಸೂಲಿಬೆಲೆ, ಮತ್ತೊಬ್ಬ ಡ್ರೋನ್ ಪ್ರತಾಪ್. ಇಬ್ಬರೂ ಈಗ ಭಯಾನಕವಾಗಿ ಟ್ರಾಲ್ ಆಗ್ತಾ ಇದ್ದಾರೆ. ಇಬ್ಬರ ಕೇಸೂ ಹೆಚ್ಚು ಕಡಿಮೆ ಒಂದೇನೇ. ಇಬ್ಬರೂ ತಮ್ಮ ತಮ್ಮ ಲಾಭಕ್ಕಾಗಿ ನೂರಾರು ಸುಳ್ಳುಗಳನ್ನು ಹೇಳಿದರು, ನೂರಾರು ಕಥೆಗಳನ್ನು ಕಟ್ಟಿದರು. ಇಬ್ಬರ ಸುಳ್ಳುಗಳೂ ಬಯಲಾಗಿವೆ. ಈಗ ಇಬ್ಬರೂ ಸಾರ್ವಜನಿಕವಾಗಿ ಬೆತ್ತಲಾಗಿ ನಿಂತಿದ್ದಾರೆ. ಯಾವ ಭಾಷಣಗಳ ಮೂಲಕ ಇಬ್ಬರೂ ಒಂದು ಸಾರ್ವಜನಿಕ ಐಡೆಂಟಿಟಿ ಪಡೆದರೋ, ಹಣ ಮಾಡಿದರೋ, ಖ್ಯಾತಿ ಗಳಿಸಿದರೋ ಅದೇ ಭಾಷಣಗಳೇ ಇವರಿಬ್ಬರನ್ನೂ ನಡುರಸ್ತೆಯಲ್ಲಿ ತಂದು ನಿಲ್ಲಿಸಿವೆ. ಸೂಲಿಬೆಲೆಯನ್ನಾದರೂ ಆತನ ರಾಜಕೀಯ ಮತ್ತು ಸಾಮಾಜಿಕ ಪ್ರಭಾವದ ಕಾರಣಕ್ಕಾಗಿ ರಕ್ಷಿಸಿಕೊಳ್ಳುವ ಜನರಿರಬಹುದು. ಆದರೆ ಪ್ರತಾಪ ಈಗ ದಿಕ್ಕಾಪಾಲಾಗಿದ್ದಾನೆ.

ಸೂಲಿಬೆಲೆ ಉದಯಟಿವಿಯ ಹರಟೆ ಎಂಬ ಕಾರ್ಯಕ್ರಮದಲ್ಲಿ ಮೊದಲು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು. ಅಲ್ಲಿ ಸೂಲಿಬೆಲೆಯನ್ನು ಮೀರಿಸುವ ಕೃಷ್ಣೇಗೌಡ, ಸುಧಾ ಬರಗೂರು,‌ ಪ್ರಾಣೇಶ್ ರಂಥ ಮಾತಿನ ಮಲ್ಲರು ಇದ್ದರು. ಹರಟೆ ಹೆಸರೇ ಹೇಳುವಂತೆ ತಮಾಶೆಗಳನ್ನು ಹೇಳಿಕೊಳ್ಳುವ ಎರಡು ಗುಂಪುಗಳ ಹುಸಿಕದನದ ಡಿಬೇಟು. ಆದರೆ ಸೂಲಿಬೆಲೆ ಅಲ್ಲೂ ಕೂಡ ತನ್ನ ಬಲಪಂಥೀಯ ಥಿಯರಿಗಳನ್ನು ತುರುಕುವ ಪ್ರಯತ್ನ ಪಡುತ್ತಿದ್ದ.‌ ಮಾತಿನ ನಾಟಕೀಯತೆ, ನಾಭಿಯಿಂದಲೇ ಧ್ವನಿ ತೆಗೆದಂತೆ ಶಬ್ದ ಹೊರಡಿಸುವ ಶೈಲಿ, ಹರಿಕಥೆಯನ್ನು ಹೋಲುವ ರಾಗ ಜನರನ್ನು ಸೆಳೆದಿತ್ತು. ಸೂಲಿಬೆಲೆ ಅದೇನೋ ಜಾಗೋ ಭಾರತ್ ಮಾಡಿದ. ಆಮೇಲೆ ನಮೋ ಬ್ರಿಗೇಡ್, ಯುವಾ ಬ್ರಿಗೇಡ್ ಇತ್ಯಾದಿಗಳು ಶುರುವಾದವು‌. ಈಗ ಸೂಲಿಬೆಲೆಯನ್ನು ಇಕ್ಕಟ್ಟಿಗೆ‌ ಸಿಲುಕಿಸಿರುವುದು ಜಾಗೋ ಭಾರತ್ ಮತ್ತು ಅದಕ್ಕೂ ಹಿಂದಿನ ಭಾಷಣಗಳಲ್ಲ. ನಮೋ ಬ್ರಿಗೇಡ್ ನಂತರದ ಭಾಷಣಗಳು. ತನ್ನ ಭಾಷಣಗಳು ರೆಕಾರ್ಡ್ ಆಗ್ತಾವೆ, ಮುಂದೊಂದು ದಿನ ಇದೇ ಭಾಷಣಗಳೇ ತನ್ನ ಶತ್ರುವಾಗಿಬಿಡ್ತಾವೆ ಅನ್ನೋದರ ಪರಿವೇ ಇಲ್ಲದೆ ಸೂಲಿಬೆಲೆ ಮಾತನಾಡುತ್ತ ಹೋದ. ವಿಶೇಷವಾಗಿ ಮೋದಿ ಕುರಿತು ಆತ ದೊಡ್ಡ ಆಧುನಿಕ ಪುರಾಣವನ್ನೇ ಸೃಷ್ಟಿಸಿದ, ಅದನ್ನು ತಾನು ನಂಬಿಕೊಂಡ ಮತ್ತು ಜನರಿಗೆ ನಂಬಿಸಲು ಯತ್ನಿಸಿದ, ನಂಬಿಸಿಯೂ ಬಿಟ್ಟ. ಈ ಕಾರ್ಯಕ್ಕಾಗಿ ಸೂಲಿಬೆಲೆ ದೊಡ್ಡ ಮಟ್ಟದ ಸಂಭಾವನೆಗಳನ್ನು ಪಡೆದ ಎಂದು ಆತನನ್ನು ಬಲ್ಲವರು ಹೇಳುತ್ತಾರೆ‌. ರಾಘವೇಶ್ವರ ಭಾರತಿ ಸ್ವಾಮೀಜಿ ರೇಪ್ ಆರೋಪಕ್ಕೆ ಸಿಕ್ಕಿಬಿದ್ದಾಗ, ಡ್ಯಾಮೇಜ್ ಕಂಟ್ರೋಲ್ ಮಾಡಲು ಬಂದು‌ ನಿಂತವನು ಇದೇ ಚಕ್ರವರ್ತಿ. ರಾಘವೇಶ್ವರನನ್ನು ರಾಮಕೃಷ್ಣ ಪರಮಹಂಸರ ಲೆವೆಲ್ಲಿಗೆ ಹಾಡಿ ಹೊಗಳಿಬಿಟ್ಟ. ಒನ್ಸ್ ಎಗೇನ್ ಎಷ್ಟು ಪೇಮೆಂಟ್ ಪಡೆದ ಎಂಬುದನ್ನು ಅವರಿಬ್ಬರೇ ಹೇಳಬೇಕು.

ಡಿಜಿಟಲ್ ಯುಗದ ಲಾಭವೇನೆಂದರೆ ನೀವು ಬಹಳ ಸುಲಭವಾಗಿ ಜನರನ್ನು ನಿಮ್ಮ ಮಾತು, ಭಾಷಣದ ಮೂಲಕ ತಲುಪಬಹುದು. ನಿಮ್ಮ ಮಾತು ಆಕರ್ಷಣೀಯವಾಗಿರಬೇಕು, ಅಷ್ಟೆ. ನೀವು ಏನನ್ನು ಹೇಳುತ್ತೀರೋ ಮುಖ್ಯವಲ್ಲ, ಹೇಳುವುದನ್ನು ಎಷ್ಟು ಚೆನ್ನಾಗಿ ಹೇಳುತ್ತೀರ ಅನ್ನೋದೇ ಮುಖ್ಯ. ಆದರೆ ಈ ಡಿಜಿಟಲ್ ಯುಗದ ದೊಡ್ಡ ಅಪಾಯವೆಂದರೆ ನೀವು ಸುಳ್ಳು ಹೇಳಿದರೆ ನಿಮ್ಮನ್ನು ಹೊತ್ತು ಮೆರೆಸಿದ ಅದೇ ಡಿಜಿಟಲ್ ಜಗತ್ತು ಪಾತಾಳಕ್ಕೆ ಎಸೆಯುತ್ತದೆ. ಅದು ಕಿಂಚಿತ್ತೂ ಕರುಣೆಯನ್ನು ತೋರುವುದಿಲ್ಲ‌. ನರೇಂದ್ರ ಮೋದಿಯನ್ನು ಕಾಡಿಸುತ್ತಿರುವುದು ವಿರೋಧ ಪಕ್ಷಗಳ ಹೇಳಿಕೆಗಳಿಗಿಂತ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅವರೇ ಕೊಟ್ಟ ಹೇಳಿಕೆಗಳು! ಪೆಟ್ರೋಲ್ ಬೆಲೆ ಹೆಚ್ಚಾದರೆ, ಚೀನಾದವರು ದುರಾಕ್ರಮಣ ಮಾಡಿದರೆ, ಪಾಕಿಸ್ತಾನ ಗಡಿಯಲ್ಲಿ ಯೋಧರು ಸತ್ತರೆ, ಮೋದಿಯನ್ನು ಮೊದಲು ಟೀಕಿಸುವುದು ಮೋದಿಯೇ! ಅವರ ಹಳೆಯ ಟ್ವೀಟುಗಳೇ ಅಥವಾ ಅವರ ಹಳೆಯ ಭಾಷಣಗಳೇ ಆಗಿರುತ್ತವೆ.

ಮೋದಿ 1.0 ಶುರುವಾಗುವುದಕ್ಕೆ ಮುನ್ನ ಮೋದಿ ಗುಣಗಾನಕ್ಕೆ ಯಾವ ಅಡೆತಡೆಯೂ ಇರಲಿಲ್ಲ. ಮೋದಿ ಅಧಿಕಾರಕ್ಕೆ ಬಂದರೆ ಅದನ್ನು ಮಾಡುತ್ತಾರೆ, ಇದನ್ನು ಮಾಡುತ್ತಾರೆ ಎಂದು ಅವರ ಬೆಂಬಲಿಗರು ಸುಲಭವಾಗಿ ಹೇಳಬಹುದಿತ್ತು. ಸೂಲಿಬೆಲೆ ಅಷ್ಟು ಮಾಡಿದ್ದರೆ ಸಾಕಿತ್ತು. ಆದರೆ ಆತ ಮೋದಿಗೆ ಅತಿಮಾನುಷ ಶಕ್ತಿಗಳನ್ನು ಆರೋಪಿಸಿಬಿಟ್ಟ‌. ಬ್ಲಾಕ್ ಮನಿ, ಚಿನ್ನದ ರಸ್ತೆಯಿಂದ ಹಿಡಿದು ಬುಲೆಟ್ ಟ್ರೈನ್ ವರೆಗೆ ಹೇಳಿದ್ದೆಲ್ಲ ಮಹಾಮುಠ್ಠಾಳ ಸುಳ್ಳುಗಳೇ. ಈ ಸುಳ್ಳುಗಳಿಗೆ ಇರುವ ಸೋರ್ಸ್ ಆಫ್ ಇನ್ಫಾರ್ಮೇಶನ್ ಗಳು ಆತ ಹೇಳುತ್ತಿದ್ದ ಬೇರೆ ಬೇರೆ ದೇಶಗಳಲ್ಲಿ, ರಾಜ್ಯಗಳಲ್ಲಿ ಇರುವ ಆತನ ಅನಾಮಿಕ ಕಜಿನ್ ಸಿಸ್ಟರ್ ಗಳು, ಮಿತ್ರರುಗಳು.

ಕಳೆದ ಒಂದು ತಿಂಗಳಿನಿಂದ ಇದೆಲ್ಲ ಮಹಾಸುಳ್ಳುಗಳ ಪೋಸ್ಟ್ ಮಾರ್ಟಂ ನಡೆಯುತ್ತಿದೆ. ಈತನ ಹಳೆಯ ಭಾಷಣಗಳನ್ನು ಗೇಲಿ ಮಾಡಿ ನಗಲಾಗುತ್ತಿದೆ. ಇವತ್ತಿನ ಸೂಲಿಬೆಲೆಗೆ ಐದಾರು ವರ್ಷ ಹಿಂದಿನ ಸೂಲಿಬೆಲೆಯೇ ಶತ್ರುವಾಗಿದ್ದಾನೆ. ಮೊದಲೆಲ್ಲ ಸುಳ್ಳುಗಳು ನಡೀತಾ ಇದ್ವು. ಹೇಳಿದ್ದನ್ನು ಹೇಳಿಯೇ ಇಲ್ಲ ಎಂದು ಹೇಳಿ ಬಚಾವಾಗಬಹುದಿತ್ತು. ಆದರೆ ಡಿಜಿಟಲ್ ಯುಗದಲ್ಲಿ ಹಾಗೆ ಆಗುವುದಿಲ್ಲ‌. ನಾಭಿಯಿಂದ ಶಬ್ದ ಹೊರಡಿಸಿ ಆಡಿದ ಭಾಷಣದ ನಡುವೆ ಒಮ್ಮೆ ಜೋರಾಗಿ ಟರ್ ಎಂದು ಹೂಸಿದ್ದರೂ ಅದು ರೆಕಾರ್ಡ್ ಆಗಿರುತ್ತದೆ. ತಪ್ಪಿಸಿಕೊಳ್ಳುವುದು ಹೇಗೆ ಸಾಧ್ಯ?

ಚಕ್ರವರ್ತಿ ಸೂಲಿಬೆಲೆಯ ಜತೆ ಇದ್ದವರು, ಹಳೆಯ ಅನುಯಾಯಿಗಳಿಂದ ಹಿಡಿದು ಹೊಸ ಅಭಿಮಾನಿಗಳವರೆಗೆ ಎಲ್ಲರೂ ಒಂದು ರೀತಿಯ ಶಾಕ್ ಗೆ ಒಳಗಾಗಿದ್ದಾರೆ. “ಅಣ್ಣಾ, ನಿಮ್ಮನ್ನು ನಾವು ಈಗಲೂ ಪ್ರೀತಿಸ್ತೀವಿ. ಇನ್ನು ಮೇಲಾದರೂ ಸುಳ್ಳು ಹೇಳಬೇಡಿ ಅಣ್ಣಾ, ಅವರೆಲ್ಲ ನಿಮ್ಮನ್ನು ಟ್ರಾಲ್ ಮಾಡ್ತಾ ಇದ್ದರೆ ನೋವಾಗುತ್ತೆ ಅಣ್ಣ” ಎಂದು ಆತನ ಮುಗ್ದ ಅಭಿಮಾನಿ ಕಮೆಂಟ್ ಮಾಡಿದ್ದ! ಇಂಥ ನೂರಾರು ಕಮೆಂಟುಗಳನ್ನು ಆತನ ಪೇಜ್ ನಲ್ಲಿ ನೀವು ಗಮನಿಸಬಹುದು.

ಇಷ್ಟಾದ ಮೇಲೂ ಹೇಗೆ ಸಮರ್ಥಿಸಿಕೊಳ್ಳುವುದು? ಕೆಲವು ಸೂಲಿಬೆಲೆ ಸಮರ್ಥಕರು ಇದೆಲ್ಲ ಸಿದ್ಧರಾಮಯ್ಯ ಬೆಂಬಲಿಗರು ಡಿ.ಕೆ.ಶಿವಕುಮಾರ್ ಹಣಿಯಲು ಮಾಡಿರುವ ತಂತ್ರ ಎಂಬ ಹೊಸ ಸಂಶೋಧನೆ ಮುಂದಿಡುತ್ತಿದ್ದಾರೆ ಎಂದು ಕೇಳಲ್ಪಟ್ಟೆ. ಅಷ್ಟಕ್ಕೂ ಇವತ್ತು ಚಕ್ರವರ್ತಿ ಸೂಲಿಬೆಲೆಯನ್ನು ಟ್ರಾಲ್ ಮಾಡ್ತಾ ಇರೋದು ಕಾಂಗಿಗಳೂ ಅಲ್ಲ, ಸಿದ್ಧರಾಮಯ್ಯ ಬೆಂಬಲಿಗರೂ ಅಲ್ಲ, ಪ್ರಗತಿಪರರೂ ಅಲ್ಲ. ಸೂಲಿಬೆಲೆಯನ್ನು ಟ್ರಾಲ್ ಮಾಡ್ತಾ ಇರೋದು ಸ್ವತಃ ಸೂಲಿಬೆಲೆಯೇ. ಅವರ ಹಳೆಯ ವಿಡಿಯೋಗಳೇ! ಏನೊಂದು ಶಬ್ದವೂ ಬರೆಯದೆ ಆತನ ಹಳೆಯ ವಿಡಿಯೋ ತುಣುಕು ಹಾಕಿದರೆ ಜನ‌ ಬಿದ್ದುಬಿದ್ದು ನಗ್ತಾ ಇದ್ದಾರೆ. ಇದಕ್ಕೆ ಯಾರನ್ನೋ ಹೊಣೆ ಮಾಡಿದರೆ, ಅದಕ್ಕೊಂದು ಕಾನ್ಪಿರಸಿ ಥಿಯರಿ ಮುಂದಿಟ್ಟರೆ ಜನ ನಂಬುತ್ತಾರಾ?

ಸೂಲಿಬೆಲೆಯ ದುರದೃಷ್ಟಕ್ಕೆ ಅವನ ತಮ್ಮನಂಥ ಹುಡುಗ ಡ್ರೋಣ್ ಪ್ರತಾಪ ಟ್ರಾಲ್ ಗೆ ಒಳಗಾಗುತ್ತಿದ್ದಾನೆ. ಇವನದೂ ಸೇಮ್ ಟು ಸೇಮ್ ಕೇಸ್. ಸುಳ್ಳಿನ ಗುಡಾಣ ಇವನು. ಹಿರಿಯ ಪತ್ರಕರ್ತ ರಾದ ಬಿ.ಎಂ.ಬಷೀರ್ ಅವರು ಪ್ರತಾಪ್ ತನ್ನ ಸ್ಪಷ್ಟನೆ ಕೊಡುವವರೆಗೆ ಸುಮ್ಮನಿರುವುದು ಒಳ್ಳೆಯದು, ಅದಕ್ಕೆ ಮುನ್ನ ಟ್ರಾಲ್ ಮಾಡುವುದು ಸಹಜನ್ಯಾಯವಲ್ಲ ಎಂದು ಬರೆದಿದ್ದರು. ನನಗೂ ಹಾಗೇ ಅನ್ನಿಸಿತ್ತು. ಆದರೆ ಅವನ‌ ವಿಡಿಯೋಗಳನ್ನು ನೋಡಿದಾಗ ಮೂರ್ಛೆ ತಪ್ಪುವುದೊಂದು ಬಾಕಿ. ಆ ಸುಳ್ಳುಗಳನ್ನು ಒಂದಲ್ಲ ಐವತ್ತು ಪ್ರೆಸ್ ಮೀಟ್ ಮಾಡಿದರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.

ಈಗ ನಾನು ಮೊದಲು ಹೇಳಿದ ಗಂಡ-ಹೆಂಡತಿ ವಿಷಯಕ್ಕೆ ವಾಪಾಸು ಹೋಗೋದಾದರೆ, ಸೂಲಿಬೆಲೆ-ಪ್ರತಾಪ್ ವಿಷಯದಲ್ಲೂ ಅದೇ ನಡೆಯುತ್ತಿದೆ. ಗಂಡ ಮಂಗಳೂರು ಬೀಚ್ ನಲ್ಲಿ ಯಾಕಿದ್ದ ಅಂತ ಹೆಂಡತಿಗೆ ಊಹಿಸಿಕೊಳ್ಳೋದು ಸುಲಭ. ಒಂದು ಸುಳ್ಳು ಹೊರಗೆ ಬಂದರೆ ಅದರ ಹಿನ್ನೆಲೆ, ಮುನ್ನೆಲೆಗಳನ್ನು reconstruction ಮಾಡೋದು ಸುಲಭ.

ನಮ್ಮದು ಬಸವಣ್ಣನ ನಾಡಲ್ಲವೇ? ಕಳಬೇಡ, ಕೊಲಬೇಡ ಎಂದ ಮೇಲೆ ಬಸವಣ್ಣ ನಮಗೆ ಹೇಳಿಕೊಟ್ಟಿದ್ದು ಹುಸಿಯ ನುಡಿಯಲು ಬೇಡ ಅಂತನೇ. ಹೀಗಾಗಿ ಸುಳ್ಳುಪುರುಕರನ್ನು ಕಂಡರೆ ನಮಗೆ ಕೋಪ ಸ್ವಲ್ಪ ಜಾಸ್ತಿನೇ. ಈಗ ನಾವು ‘ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂಬ ಗಾದೆಯನ್ನು ಹೀಗೆ ಬದಲಾಯಿಸಬಹುದು: ಸುಳ್ಳು ಬೊಗಳಿದವನು ಟ್ರಾಲ್ ಆಗಲೇಬೇಕು.

– ದಿನೇಶ್ ಕುಮಾರ್ ಎಸ್.ಸಿ.

error: Content is protected !! Not allowed copy content from janadhvani.com