ನವದೆಹಲಿ: ರಾಜಸ್ಥಾನ ರಾಜ್ಯ ಕಾಂಗ್ರೆಸ್’ನಲ್ಲಿ ರಾಜಕೀಯ ಬಿಕ್ಕಟ್ಟು ತಾರಕ್ಕೇರಿರುವ ನಡುವಲ್ಲೇ ರಾಜಸ್ಥಾನ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಸಚಿನ್ ಪೈಲಟ್ ಅವರನ್ನು ವಜಾಗೊಳಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಬಂಡಾಯ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಇಂದು ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಸಬೆಯಲ್ಲಿ ಈ ಕಠಿಣ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಸಚಿನ್ ಪೈಲಟ್ ಅವರು ಗೈರು ಹಾಜರಾಗಿದ್ದರು. ಇದರಂತೆ ಸಭೆಯಲ್ಲಿ ಸಚಿನ್ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪೈಲಟ್ ಅವರ ಜೊತೆಗೆ ಬಂಡಾಯ ಸಾರಿದ್ದ ಮತ್ತಿಬ್ಬರು ಸಚಿವರನ್ನೂ ಕೂಡ ಉಚ್ಛಾಟಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಸಚಿನ್ ಪೈಲಟ್, ವಿಶ್ವೇಂದ್ರ ಸಿಂಗ್ ಹಾಗೂ ರಮೇಶ್ ಮೀನಾ ಅವರನ್ನು ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸಚಿನ್ ಪೈಲಟ್ ಅವರಿದ್ದ ಸ್ಥಾನಕ್ಕೆ ಇದೀಗ ಗೋವಿಂದ್ ಸಿಂಗ್ ದೋತ್ಸ್ರಾ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಚಿನ್ ಪೈಲಟ್ ಹಾಗೂ ಕೆಲ ಸಚಿವರು ಹಾಗೂ ಶಾಸಕರು ಬಿಜೆಪಿ ಆಮಿಷ ಹಾಗೂ ಬೆಲೆಗೆ ಸಿಕ್ಕಿಕೊಂಡಿದ್ದು, ಈ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸುತ್ತಿದ್ದಾರೆಂದು ಇದೇ ವೇಳೆ ಆರೋಪಿಸಿದ್ದಾರೆ.
15ಕ್ಕೂ ಹೆಚ್ಚು ಶಾಸಕರನ್ನು ತಮ್ಮೊಂದಿಗೆ ಕರೆದೊಯ್ದು ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಸಚಿನ್ ಪೈಲಟ್ ಅವರ ನಡೆಗೆ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ಸಭೆಗೆ ಸಚಿನ್ ಪೈಲಟ್ ಅವರಿಗೂ ಆಹ್ವಾನ ನೀಡಲಾಗಿತ್ತು.
ಆದರೆ, ಸಭೆಗೆ ಸಚಿನ್ ಪೈಲಟ್ ಅವರು ಗೈರು ಹಾಜರಾಗಿತ್ತು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಕ್ಷದಿಂದ ಸಚಿನ್ ಅವರನ್ನು ಹೊರಹಾಕಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ 102 ಶಾಸಕರು ಒತ್ತಾಯಿಸಿದ್ದರು ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಬಹುಮತ ಸಾಬೀತಿಗೆ ಸಚಿನ್ ಪೈಲಟ್ ಬಣ ಒತ್ತಾಯ :
ರಾಜಸ್ತಾನ ವಿಧಾನಸಭೆಯಲ್ಲಿ ಸದಸ್ಯರ ಸದನ ಪರೀಕ್ಷೆಗೆ ಒತ್ತಾಯಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ.ಸದನದಲ್ಲಿ ಬಹುಮತ ಸಾಬೀತಿನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಅವರನ್ನು ಕೇಳಿದಾಗ, ಸದ್ಯಕ್ಕೆ ನಾವು ಸದನ ಪರೀಕ್ಷೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಅವರನ್ನು ಒತ್ತಾಯಿಸುವುದಿಲ್ಲ. ಭ್ರಷ್ಟ ಸರ್ಕಾರ ಈ ಕೊರೋನಾ ಬಿಕ್ಕಟ್ಟು ಸಮಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ನಮ್ಮ ಆಕ್ಷೇಪವಾಗಿದೆ. ಸರ್ಕಾರ ದುರ್ಬಲವಾಗಿದೆ. ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡಲಿ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಕೆಲಸ ಮಾಡುವ ಯುವ ನಾಯಕರಿಗೆ ಬೆಲೆ ಕೊಡುತ್ತಿಲ್ಲ, ಇದರಿಂದಾಗಿಯೇ ಜ್ಯೋತಿರಾಧಿತ್ಯ ಸಿಂದಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ರಾಜಸ್ತಾನದಲ್ಲಿ ಸಚಿನ್ ಪೈಲಟ್ ಸ್ಥಿತಿಯೂ ಕೂಡ ಅದೇ ರೀತಿ. ಚೆನ್ನಾಗಿ ಕೆಲಸ ಮಾಡಿ ಪಕ್ಷ ಸಂಘಟಿಸಿದ್ದಾರೆ, ಆದರೆ ಅಧಿಕಾರ ವಿಷಯದಲ್ಲಿ ಅವರನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದರು.ಈ ಮಧ್ಯೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸಚಿನ್ ಪೈಲಟ್ ಬಣ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಅವರನ್ನು ಒತ್ತಾಯಿಸಿದೆ. ಇದರಿಂದ ಅಶೋಕ್ ಗೆಹ್ಲೊಟ್ ಪರ ಎಷ್ಟು ಶಾಸಕರಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ರಮೇಶ್ ಮೀನಾ ಹೇಳಿದ್ದಾರೆ. ಇವರು ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡ ಪ್ರಮುಖರಾಗಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಪಾಲರ ಭೇಟಿ
ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಇತರ ಇಬ್ಬರು ಸಚಿವರನ್ನು ವಜಾಗೊಳಿಸಿದ ನಂತರ ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ , ರಾಜ್ಯಪಾಲ ಕಲ್ ರಾಜ್ ಮಿಶ್ರಾ ಅವರನ್ನು ಭೇಟಿಯಾದರು.
ಮುಂಬರುವ ದಿನಗಳಲ್ಲಿ ಸಂಪುಟ ಪುನಾರಚನೆ ಬಗ್ಗೆ ಕಲ್ ರಾಜ್ ಮಿಶ್ರಾ ಅವರಿಗೆ ಅಶೋಕ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.
ಸಚಿನ್ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ಹಾಗೂ ವಿಶ್ವೇಂದರ್ ಸಿಂಗ್, ರಮೇಶ್ ಮೀನಾ ಅವರನ್ನು ಸಂಪುಟದಿಂದ ವಜಾಗೊಳಿಸುವ ಕಾಂಗ್ರೆಸ್ ಪ್ರಸ್ತಾವವನ್ನು ರಾಜ್ಯಪಾಲ ಕಲ್ ರಾಜ್ ಮಿಶ್ರಾ ಸ್ವೀಕರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.