janadhvani

Kannada Online News Paper

ಮಂಗಳೂರು-ಕಾಸರಗೋಡು ಸಂಚಾರ ತಡೆ: ಗಡಿಯಲ್ಲಿ ಜನಾಕ್ರೋಶ

ಮಂಗಳೂರು: ಕಾಸರಗೋಡು ಜಿಲ್ಲೆಯಿಂದ ಕೆಲಸ ನಿಮಿತ್ತ ಮಂಗಳೂರಿಗೆ ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೇರಿದೆ.ಅದೇ ರೀತಿ ಮಂಗಳೂರು ಕಡೆಯಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ. ಉದ್ಯೋಗ ನಿಮಿತ್ತ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ನಿತ್ಯವೂ ಸಂಚರಿಸುತ್ತಿದ್ದವರಿಗೆ ತಲಪಾಡಿ ಚೆಕ್ ಪೋಸ್ಟ್ ಬಳಿ ಕಾಸರಗೋಡು ಜಿಲ್ಲಾಡಳಿತ ಮಂಗಳವಾರ ಬೆಳಿಗ್ಗೆ ತಡೆಹಾಕಿದೆ.

ಉದ್ಯೋಗ, ಶಿಕ್ಷಣದ ಕಾರಣಕ್ಕೆ ನಿತ್ಯವೂ ಎರಡೂ ಜಿಲ್ಲೆಗಳ ನಡುವೆ ಸಂಚರಿಸುವವರಿಗೆ ಉಭಯ ಜಿಲ್ಲಾಡಳಿತಗಳು ಪಾಸ್ ನೀಡಿದ್ದವು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಕಾಸರಗೋಡು ಜಿಲ್ಲಾಡಳಿತ ಮಂಗಳವಾರದಿಂದ ಪ್ರಯಾಣ ನಿರ್ಬಂಧಿಸಿದೆ.

ತಿಂಗಳಲ್ಲಿ ಒಮ್ಮೆ ಮಾತ್ರ ಒಂದು ಕಡೆಗೆ ಪ್ರಯಾಣಿಸಬೇಕು ಮತ್ತು ಕನಿಷ್ಠ 28 ದಿನಗಳ ಕಾಲ ಅಲ್ಲಿಯೇ ಇರಬೇಕು ಎಂಬ ಷರತ್ತನ್ನು ಕಾಸರಗೋಡು ಜಿಲ್ಲಾಡಳಿತ ವಿಧಿಸಿದೆ.‌ ಈ ಹಿಂದೆ ನೀಡಿದ್ದ ಪಾಸ್ ಹಿಡಿದು ಮಂಗಳವಾರ ಬೆಳಿಗ್ಗೆ ತಲಪಾಡಿ ಚೆಕ್ ಬಳಿ ಬಂದ ನೂರಕ್ಕೂ ಹೆಚ್ಚು ಮಂದಿಯನ್ನು ಕಾಸರಗೋಡು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಪೊಲೀಸರು ಮತ್ತು ಜನರ ನಡುವೆ ವಾಗ್ವಾದ ನಡೆಯುತ್ತಿದೆ.

ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಮುಖಂಡ ವಕೀಲ ನವೀನ್ ರಾಜ್ , ಭಾರತೀಯ ರೈಲ್ವೇ ಮಜ್ದೂರ್ ಸಂಘ ಡಿವಿಸನಲ್‌ ಅಧ್ಯಕ್ಷ ತುಳಸೀದಾಸ್, ಮಂಜೇಶ್ವರ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಅವಿನಾಶ್, ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ ಇದ್ದಾರೆ.

error: Content is protected !! Not allowed copy content from janadhvani.com