ಯುಎಇ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ಪ್ರಾಯೋಜಕತ್ವದಲ್ಲಿ ಯುಎಇಯಲ್ಲಿ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕಳುಹಿಸಿಕೊಡುವ ಮಹತ್ವಪೂರ್ಣವಾದ ಯೋಜನೆಯ ಭಾಗವಾಗಿ ಈಗಾಗಲೇ ಎರಡು ಚಾರ್ಟರ್ಡ್ ವಿಮಾನದಲ್ಲಿ 320 ರಷ್ಟು ಪ್ರಯಾಣಿಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸಲು ಸಾಧ್ಯವಾಗಿದೆ. ಪ್ರಯಾಣಿಕರ ಆದ್ಯತೆಯನ್ನು ಪರಿಗಣಿಸಿ ಅನಿವಾರ್ಯವಾಗಿ ಊರಿಗೆ ತಲುಪಲೇಬೇಕಾದವರನ್ನು ಗುರುತಿಸಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಯಶಸ್ವೀ ಎರಡು ಪ್ರಯಾಣದ ಅನುಭವದೊಂದಿಗೆ ಮೂರನೇ ಚಾರ್ಟರ್ಡ್ ವಿಮಾನಯಾನವು ಏರ್ ಅರೇಬಿಯಾ ಸಂಸ್ಥೆಯ ವಿಮಾನದಲ್ಲಿ168 ಪ್ರಯಾಣಿಕರ ಮೂಲಕ ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಧ್ಯಾಹ್ನ 12 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ ಎಂದು ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ದುಬೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ರೀತಿಯ ತೊಂದರೆಗಳಿಗೆ ಅವಕಾಶ ಕಲ್ಪಿಸಿಕೊಡದೆ ಉತ್ತಮ ರೀತಿಯಲ್ಲಿ ಪ್ರಯಾಣದ ಸುರಕ್ಷಾ ನಿಯಮಗಳ ಬಗ್ಗೆ ಪ್ರಯಾಣಿಕರಿಗೆ ಅರಿವು ನೀಡಿ ಜವಾಬ್ದಾರಿಯುತವಾಗಿ ನಡೆಸುವ ಕೆಸಿಎಫ್ ಚಾರ್ಟರ್ಡ್ ವಿಮಾನಯಾನ ಅತ್ಯಂತ ವಿಶ್ವಾಸನೀಯ ಸೇವೆಯಾಗಿ ಗುರುತಿಸಿಕೊಂಡಿದೆ. ಪ್ರಯಾಣಿಕರ ಮನತುಂಬಿದ ಮಾತುಗಳು ಕೆಸಿಎಫ್ ಬಳಗವನ್ನು ಇನ್ನಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತಿದೆ ಎಂದು ಅವರು ಹೇಳಿದರು.
ಕೆಸಿಎಫ್ ಚಾರ್ಟರ್ಡ್ ವಿಮಾನ ಸೇವೆಯ ಬಗ್ಗೆ ಜನಮೆಚ್ಚುಗೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಸಂಕಷ್ಟ ಅನುಭವಿಸುತ್ತಿರುವ ಪ್ರಯಾಣಿಕರು ಇನ್ನೂ ಹೆಚ್ಚಿನ ಚಾರ್ಟರ್ಡ್ ವಿಮಾನ ವ್ಯವಸ್ಥೆಗೊಳಿಸುವಂತೆ ಮನವಿ ಮಾಡುತ್ತಿದ್ದಾರೆ. ಇದರ ಬಗ್ಗೆ ಸಮಿತಿಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರತ್ಯೇಕವಾಗಿ ತಿಳಿಸಿದರು.