janadhvani

Kannada Online News Paper

ರಾಜ್ಯದಲ್ಲಿ ಕೊರೋನಾ ನಿಯಂತ್ರಣಾತೀತ: ಒಂದೇ ದಿನ 42 ಮಂದಿ ಬಲಿ

ಬೆಂಗಳೂರು: ಪಾಸಿಟಿವ್‌ ಪ್ರಕರಣಗಳ ಏರಿಕೆಯ ಜೊತೆಗೆ ಕರ್ನಾಟಕದಲ್ಲಿ ಕೊರೊನಾ ವೈರಸ್‌ನಿಂದ ಸಾವಿಗೀಡಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಶನಿವಾರ ಒಂದೇ ದಿನ ಕೋವಿಡ್‌ನಿಂದಾಗಿ ಬರೋಬ್ಬರಿ 42 ಜನರು ಬಲಿಯಾಗಿದ್ದು, ರಾಜ್ಯವನ್ನು ಬೆಚ್ಚಿಬೀಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 335ಕ್ಕೆ ಏರಿದೆ. ಇನ್ನು 1,839 ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 21,549ಕ್ಕೆ ಏರಿದೆ.

ರಾಜ್ಯದಲ್ಲಿ ಸುನಾಮಿಯಂತೆ ಅಪ್ಪಳಿಸುತ್ತಿದೆ ಕೊರೊನಾ ಸೋಂಕು. ಸೊಂಕು ನಿಯಂತ್ರಣಕ್ಕೆ ಸಿಗದಂತೆ ಉಲ್ಬಣಿಸುತ್ತಿದ್ದು, ಹೊಸ ಸೋಂಕಿತರ ಸಂಖ್ಯೆ ಸಾವಿರದ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಮರಣ ಪ್ರಮಾಣ ದುಪ್ಪಟ್ಟಾಗುತ್ತಿರುವುದು ಇದಕ್ಕಿಂತಲೂ ಹೆಚ್ಚು ಆತಂಕಕಾರಿ. ಐಸಿಯುನಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಇದು ಸೋಂಕು ಹೆಚ್ಚು ಮಾರಣಾಂತಿಕವಾಗುತ್ತಿರುವ ಸೂಚಕವಾಗಿದೆ.

ಕಳೆದ ಭಾನುವಾರ 1267, ಸೋಮವಾರ 1105, ಮಂಗಳವಾರ 947, ಬುಧವಾರ 1272, ಗುರುವಾರ 1502, ಶುಕ್ರವಾರ 1694 ಸೋಂಕುಗಳು ವರದಿಯಾಗಿದ್ದವು. ವಾರದಿಂದೀಚೆಗೆ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.ಶನಿವಾರ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರದ ಗಡಿ ದಾಟಿದಂತಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 21549ಕ್ಕೆ ಏರಿಕೆಯಾಗಿದೆ.

ಶನಿವಾರ 439 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 9244 ಮಂದಿ ಸಂಪೂರ್ಣ ಗುಣವಾದ್ದು, ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆಗಿದ್ದಾರೆ. ಪ್ರಸ್ತುತ 11966 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಲ್ಲಿ ಸಾವಿರ ದಾಟಿದ ಸೋಂಕು:
ಬೆಂಗಳೂರು ನಗರ ಒಂದರಲ್ಲೇ ಶನಿವಾರ 1172 ಸೋಂಕುಗಳು ದೃಢವಾಗಿದ್ದು, ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8345ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ಅಪಾಯದ ಮಟ್ಟ ತಲುಪಿದೆ. ಇದುವರೆಗೆ ನಗರದಲ್ಲಿ ಒಟ್ಟು 129 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಜಿಲ್ಲಾವಾರು ವರದಿ: ದ.ಕನ್ನಡ 75, ಬಳ್ಳಾರಿ 73, ಬೀದರ್‌ 51, ಧಾರವಾಡ 45, ರಾಯಚೂರು 41, ಮೈಸೂರು 38, ಕಲಬುರಗಿ 37, ವಿಜಯಪುರ 37, ಮಂಡ್ಯ 35, ಶಿವಮೊಗ್ಗ 31, ಹಾವೇರಿ 28, ಬೆಳಗಾವಿ 27, ಹಾಸನ 25, ಉಡುಪಿ 18, ಚಿಕ್ಕಬಳ್ಳಾಪುರ 12, ತುಮಕೂರು 12, ಬೆಂಗಳೂರು ಗ್ರಾಮಾಂತರ 11, ಕೋಲಾರ 11, ದಾವಣಗೆರೆ 7, ಚಾಮರಾಜನಗರ 5, ಗದಗ 4, ಕೊಪ್ಪಳ 3, ಚಿಕ್ಕಮಗಳೂರು 3, ರಾಮನಗರ 2, ಯಾದಗಿರಿಯಲ್ಲಿ 1 ಸೋಂಕು ದೃಢಪಟ್ಟಿದೆ. ಇಂದು ಬಾಗಲಕೋಟೆ, ಚಿತ್ರದುರ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ.

error: Content is protected !! Not allowed copy content from janadhvani.com