ನವದೆಹಲಿ: ಮೇ 31ರ ನಂತರವೂ ದೇಶದಲ್ಲಿ ಕೊರೊನಾ ವೈರಸ್ ಪ್ರಸರಣ ತಡೆಯಲು ಐದನೇ ಹಂತದ ಲಾಕ್ ಡೌನ್ ಮುಂದುವರಿಯಲಿದೆ ಎಂದು ಕೆಲವು ಮಾಧ್ಯಮಗಳು ಬಿತ್ತರಿಸಿರುವ ವರದಿಗಳನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇದೇ 31 ರಂದು ಭಾನುವಾರ ತಮ್ಮ ’ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಲಾಕ್ ಡೌನ್ 5ನೇ ಹಂತದ ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯದ ಮೂಲಗಳು ದೃಢಪಡಿಸಿವೆ ಎಂಬ ಮಾಧ್ಯಮಗಳ ವರದಿಗಳನ್ನು ಕೇಂದ್ರ ಗೃಹ ಸಚಿವಾಲಯ ತಳ್ಳಿಹಾಕಿದೆ.
ಲಾಕ್ ಡೌನ್ 5.0 ಕುರಿತ ಮಾದ್ಯಮಗಳ ವರದಿ ಕೇವಲ ವದಂತಿ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಕೊರೊನಾ ವೈರಸ್ ಪಿಡುಗಿನ ಹಿನ್ನೆಲೆ ದೇಶಾದ್ಯಂತ ಕಳೆದ 64 ದಿನಗಳಿಂದ ಲಾಕ್ ಡೌನ್ ಘೋಷಿಸಲಾಗಿದ್ದು, ಕೊರೊನಾ ವಿರುದ್ಧ ಸಮರ ನಡೆಸಲಾಗುತ್ತಿದೆ. ಆದರೆ, ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಹಲವಾರು ಸಡಿಲಿಕೆಗಳನ್ನು ನೀಡಲಾಗಿದೆ. ಲಾಕ್ ಡೌನ್ 4.0 ಅವಧಿ ಮೇ 31 ರಂದು ಮುಕ್ತಾಯವಾಗಲಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮೃತಪಟ್ಟವರ ಸಂಖ್ಯೆ 4,531ಕ್ಕೆ ತಲುಪಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,58,333 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟಪಡಿಸಿದೆ.ಇದರಲ್ಲಿ ಸುಮಾರು 86, 110 ಕೋವಿಡ್-19 ಪ್ರಕರಣಗಳು ಕ್ರಿಯಾಶೀಲವಾಗಿದ್ದು, 67, 692 ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.