janadhvani

Kannada Online News Paper

ಜೂ.1ರಿಂದ ರಸ್ತೆಗಿಳಿಯಲಿದೆ ಸಿಟಿ ಬಸ್‌- ಶೇ.60 ರಷ್ಟು ಬಸ್‌ ಸಂಚಾರ ಆರಂಭ

ಮಂಗಳೂರು: ನಗರದ ಎಲ್ಲ ರೂಟ್‌ಗಳಲ್ಲಿಯೂ ದೀರ್ಘಕಾಲದ ಬಳಿಕ ಸಾರಿಗೆ ಸೇವೆ ಪುನಾರಂಭಗೊಳ್ಳಲಿದೆ.

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸುಮಾರು 60ಕ್ಕೂ ಹೆಚ್ಚು ದಿನಗಳಿಂದ ಓಡಾಟ ನಿಲ್ಲಿಸಿದ ಸಿಟಿ ಬಸ್‌ ಹಾಗೂ ಖಾಸಗಿ ಸರ್ವಿಸ್‌ ಬಸ್‌ಗಳು ಜಿಲ್ಲೆಯಲ್ಲಿ ಜೂನ್‌ 1ರಿಂದ ರಸ್ತೆಗಿಳಿಯಲಿದ್ದು, ಶೇ.50 ರಿಂದ 60 ರಷ್ಟು ಬಸ್‌ ಸಂಚಾರ ಆರಂಭವಾಗಲಿದೆ.ಜನರ ಬೇಡಿಕೆಗೆ ಅನುಗುಣವಾಗಿ ಬಸ್‌ ಸಂಖ್ಯೆ ಹೆಚ್ಚಳವಾಗಲಿದೆ.

ಮಾರ್ಚ್ 22ರ ಜನತಾ ಕರ್ಫ್ಯೂ ಬಳಿಕ ನಗರದಲ್ಲಿ ಸಿಟಿ ಬಸ್‌, ಖಾಸಗಿ ಸರ್ವಿಸ್‌ ಬಸ್‌ ಹಾಗೂ ಕಾಂಟ್ರ್ಯಾಕ್ಟ್ ಕ್ಯಾರೇಜ್‌ ಬಸ್‌ಗಳ ಸೇವೆ ನಿಂತು ಹೋಗಿತ್ತು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇಡೀ ದೇಶವೇ ಸ್ತಬ್ಧವಾಗಿತ್ತು. ಮಾರ್ಚ್ 21ರಂದು ಬಸ್‌ಗಳು ಎಲ್ಲೆಲ್ಲಿ ತಂಗಿದ್ದವೋ ಈಗಲೂ ಅಲ್ಲೇ ಇವೆ. ಜೂನ್‌ 1ರ ಮುನ್ನ ಈ ಎಲ್ಲ ಬಸ್‌ಗಳ ಓಡಾಟ ಕ್ಷಮತೆಯ ಬಗ್ಗೆ ಪರೀಕ್ಷೆ ನಡೆಸಬೇಕಾಗಿದೆ. ಸಂಚಾರಕ್ಕೆ ಮುನ್ನ ಸ್ಯಾನಿಟೈಸೇಶನ್‌ ಮಾಡಬೇಕಾಗಿದೆ.

ಬೇಡಿಕೆ: ಖಾಸಗಿ ಬಸ್‌ಗಳಿಗೆ 6 ತಿಂಗಳು ತೆರಿಗೆ ವಿನಾಯಿತಿ ಹಾಗೂ ಜನರಿಗೆ ಹೊರೆಯಾಗದ ರೀತಿಯಲ್ಲಿ ದರ ಏರಿಕೆಗೆ ಅವಕಾಶ ನೀಡುವಂತೆ ಬಸ್‌ ಮಾಲೀಕ ಸಂಘ ಈಗಾಗಲೇ ಸರಕಾರದ ಮುಂದೆ ಬೇಡಿಕೆ ಇಟ್ಟಿತ್ತು. ಆದರೆ ರಾಜ್ಯ ಸರಕಾರ 2 ತಿಂಗಳ ವಿನಾಯಿತಿ ಮಾತ್ರ ನೀಡಿದೆ.
ಸರಕಾರದ ನಿಲುವಿನ ಕುರಿತು ಮಾತನಾಡಿದ ದಕ್ಷಿಣ ಕನ್ನಡ ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ, ಇದೊಂದು ಸರಕಾರದ ಕಣ್ಣೊರೆಸುವ ತಂತ್ರ. ಇದರಿಂದ ಬಸ್‌ ಮಾಲೀಕರಿಗೆ ಏನೂ ಪ್ರಯೋಜನವಾಗಲಾರದು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಲಕ್ಷುರಿ ಬಸ್‌ಗಳಿಗೆ ವರ್ಷಕ್ಕೆ 1 ಲಕ್ಷ ರೂ., ಕಾಂಟ್ರ್ಯಾಕ್ಟ್ ಕ್ಯಾರೇಜ್‌ಗೆ 80 ಸಾವಿರ, ಸರ್ವಿಸ್‌ ಬಸ್‌ ಗಳಿಗೆ 50 ಸಾವಿರ ಹಾಗೂ ಸಿಟಿ ಬಸ್‌ ಗೆ 35 ಸಾವಿರ ರೂ. ತೆರಿಗೆ ಕಟ್ಟುತ್ತಿದ್ದೇವೆ. ಆದರೆ ಕೆಲವು ರಾಜ್ಯಗಳಲ್ಲಿ ಇದೇ ತೆರಿಗೆ 10- 15 ಸಾವಿರ ಇರುತ್ತದೆ. ಮಧ್ಯ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡಲು ಸರಕಾರ ಶೇ.40ರಷ್ಟು ಸಬ್ಸಿಡಿ ನೀಡುತ್ತದೆ. ಆದರೆ ನಮ್ಮ ರಾಜ್ಯದಲ್ಲಿಇಂತಹ ಯಾವುದೇ ವ್ಯವಸ್ಥೆ ಇಲ್ಲಎಂದು ದಿಲ್‌ರಾಜ್‌ ಆಳ್ವ ನುಡಿಯುತ್ತಾರೆ.

ಲಾಕ್‌ಡೌನ್‌ ಕಾರಣ ಸುಮಾರು ಎರಡು ತಿಂಗಳಿನಿಂದ ಬಸ್‌ ಓಡಾಟ ನಡೆಸದೆ ಇರುವುದರಿಂದ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಲಿವೆ. ಎಂಜಿನ್‌ಗೆ ಸಂಬಂಧಿಸಿ ಸಣ್ಣಪುಟ್ಟ ಸಮಸ್ಯೆ ಹಾಗೂ ಬ್ಯಾಟರಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಬಸ್‌ ಮಾಲೀಕರು ಅಳಲು ವ್ಯಕ್ತಪಡಿಸುತ್ತಾರೆ.

ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಜೂನ್‌ 1ರಿಂದ ಖಾಸಗಿ ಬಸ್‌ ಸಂಚಾರವನ್ನು ಆರಂಭಿಸುತ್ತಿದ್ದೇವೆ. ತಿಂಗಳಿಗೆ 10 ಸಾವಿರಕ್ಕೆ ದುಡಿಯುವ ಮಂದಿಗೆ ದಿನಾ 100- 200 ರೂ. ಕೊಟ್ಟು ಆಟೋರಿಕ್ಷಾದಲ್ಲಿ ಹೋಗಲು ಸಾಧ್ಯವಿಲ್ಲ. ಎಷ್ಟೋ ಜನರು ದಿನಾ ಫೋನ್‌ ಮಾಡಿ ಸಿಟಿ ಬಸ್‌ ಆರಂಭಿಸುವಂತೆ ಮನವಿ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಕಷ್ಟವಾಗಬಾರದು ಎಂಬ ನೆಲೆಯಲ್ಲಿ ಬಸ್‌ ಸೇವೆ ಶುರುವಾಗಲಿದೆ.

ದಿಲ್‌ರಾಜ್‌ ಆಳ್ವ, ಅಧ್ಯಕ್ಷರು, ದ.ಕ. ಸಿಟಿ ಬಸ್‌ ಮಾಲೀಕರ ಸಂಘ