ನವದೆಹಲಿ: ಸತತ 3ನೇ ದಿನ ಕೂಡ ಭಾರತದಲ್ಲಿ 6000ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಕೇಸು ಪತ್ತೆಯಾಗಿದ್ದು, ಸೋಮವಾರ ದಾಖಲೆಯ 6,977 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,38,845ಕ್ಕೆ ತಲುಪಿದೆ.
ವಿಶ್ವದಲ್ಲಿ 54 ಲಕ್ಷ ಜನರಲ್ಲಿ ಕೊರೋನಾ ವೈರಸ್ ಇದೆ. ಈ ಪೈಕಿ 3.46 ಲಕ್ಷ ಜನರು ಕೊರೋನಾ ವೈರಸ್ಗೆ ಮೃತಪಟ್ಟಿದ್ದಾರೆ. ಈ ಪೈಕಿ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1.38 ಲಕ್ಷ ಇದೆ. ಕಳೆದ 24 ಗಂಟೆಯಲ್ಲಿ 154 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಸಾವಿನ ಸಂಖ್ಯೆ 4,021 ಆಗಿದೆ.
ಇನ್ನು ದೇಶದಲ್ಲಿ 1,38,845 ಮಂದಿ ಸೋಂಕಿತರ ಪೈಕಿ 57720 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಒಂದೇ ದಿನ 6,977 ಮಂದಿಯಲ್ಲಿ ವೈರಸ್ ಪತ್ತೆಯಾಗಿರುವುದು ಈ ವರೆಗಿನ ಗರಿಷ್ಠ ಪ್ರಮಾಣವಾಗಿದೆ.
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ಅತೀ ಹೆಚ್ಚು 3041 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ತಮಿಳುನಾಡಿನಲ್ಲಿ 765, ದೆಹಲಿಯಲ್ಲಿ 508, ಗುಜರಾತ್ 394, ಪಶ್ಚಿಮ ಬಂಗಾಳದಲ್ಲಿ 208 ಮತ್ತು ರಾಜಸ್ಥಾನದಲ್ಲಿ 152 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ.
ಎರಡು ವಾರಗಳ ಹಿಂದೆ 14ನೇ ಸ್ಥಾನದಲ್ಲಿದ್ದ ಭಾರತ ಈಗ 10ನೇ ಸ್ಥಾನಕ್ಕೆ ಏರಿಕೆ ಆಗಿದೆ. ಶೀಘ್ರವೇ ಟರ್ಕಿ, ಜರ್ಮನಿ ಹಾಗೂ ಫ್ರಾನ್ಸ್ ದೇಶವನ್ನು ಭಾರತ ಹಿಂದಿಕ್ಕುವ ಲಕ್ಷಣ ಗೋಚರವಾಗಿದೆ.
ಲಾಕ್ಡೌನ್ ಸಡಿಲಿಕೆ ನಂತರ ಕೊರೋನಾ ವೈರಸ್ ಮಿತಿ ಮೀರಿ ಹರಡುತ್ತಿದೆ. ಈ ವೈರಸ್ ನಿಯಂತ್ರಣ ಅಸಾಧ್ಯ ಎಂಬಂತಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ವೈರಸ್ ಸೋಂಕಿತರ ಸಂಖ್ಯೆ ಮಿತಿ ಮೀರುವ ಸಾಧ್ಯತೆ ಇದೆ. 16 ಲಕ್ಷ ಸೋಂಕಿತರನ್ನು ಹೊಂದುವ ಮೂಲಕ ಅಮೆರಿಕ ಮೊದಲ ಸ್ಥಾನದಲ್ಲಿ ಇದ್ದರೆ, 3.63 ಲಕ್ಷ ಸೋಂಕಿತರಿರುವ ಬ್ರೇಜಿಲ್ ಎರಡನೇ ಹಾಗೂ 3.44 ಲಕ್ಷ ಸೋಂಕಿತರಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ.