ಮಂಗಳೂರು: ಬಂಟ್ವಾಳ ತಾಲೂಕಿನ ಯುವಕೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ರಕ್ಷಣೆಗೆ ಪಣತೊಟ್ಟ ಯುವಕರ ತಂಡವೊಂದು ಜೀವದ ಹಂಗುತೊರೆದು ಕಾರ್ಯಾಚರಣೆ ನಡೆಸಿದ ಮಾನವೀಯ ಪ್ರಕರಣವೊಂದು ಭಾನುವಾರ ನಡೆದಿದೆ.
ಕಲ್ಲಡ್ಕದ ಕೊಳಕೀರು ನಿವಾಸಿ ನಿಶಾಂತ್ (35) ಆತ್ಮಹತ್ಯೆ ಮಾಡಿಕೊಂಡ ಯುವಕ. ಭಾನುವಾರ ಬೆಳಗ್ಗೆ ಪಾಣೆಮಂಗಳೂರಿನಲ್ಲಿರುವ ನೇತ್ರಾವತಿ ಸೇತುವೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈತ ನದಿಗೆ ಹಾರುವುದನ್ನು ಕಂಡ ಗೂಡಿನಬಳಿಯ ಶಮೀರ್ ಮುಹಮ್ಮದ್, ತೌಸೀಫ್, ಝಾಹಿದ್, ಜಾಯಿದ್, ಅಕ್ಕರಂಗಡಿಯ ಮುಕ್ತಾರ್, ಆರಿಫ್ ಮತ್ತಿತರರು ಜೀವದ ಹಂಗು ತೊರೆದು ನದಿಗೆ ಹಾರಿ ಆತನನ್ನು ಮೇಲಕ್ಕೆತ್ತಿದರು. ಆತನನ್ನು ರಕ್ಷಿಸಿ ದಡಕ್ಕೆ ತಂದ ಬಳಿಕ ಕೊರೊನಾವನ್ನು ಲೆಕ್ಕಿಸದೆ ಮಾನವೀಯ ನೆಲೆಯಲ್ಲಿ ಯುವಕರು,ಯುವಕನ ರಕ್ಷಣೆಗೆ ಪ್ರಯತ್ನಪಟ್ಟರು. ಯುವಕನ ಎದೆಯ ಭಾಗದಲ್ಲಿ ಪಂಪ್ ಮಾಡಿದ್ದಲ್ಲದೆ, ಕೈಯನ್ನು ಉಜ್ಜಿ ಉಸಿರಾಟದ ಪ್ರಯತ್ನ ಮಾಡಿದರು. ಅಲ್ಲೂ ಪ್ರಯತ್ನ ಕೈಗೂಡದಿದ್ದಾಗ ಯುವಕನ ಬಾಯಿಗೆ ಬಾಯಿ ಹಾಕಿ ಉಸಿರಾಟ ಪಂಪ್ ಮಾಡುವ ಪ್ರಯತ್ನಪಟ್ಟರು. ಆದರೂ ಯುವಕ ಮಾತ್ರ ಬದುಕುಳಿಯಲೇ ಇಲ್ಲ.ಭಾನುವಾರ ರಂಝಾನ್ ಮುಗಿದು ಈದ್-ಉಲ್-ಫಿತ್ರ್ ಸಂಭ್ರಮ. ಹಬ್ಬದ ಕಾರಣದಿಂದ ಎಲ್ಲರೂ ಸಂಭ್ರಮವನ್ನಾಚರಿಸುತ್ತಿದ್ದರು ಗೂಡಿನಬಳಿ ಯುವಕರ ತಂಡ ರಕ್ಷಣೆ ಕಾರ್ಯದಲ್ಲಿ ನಿರತವಾಗಿತ್ತು. ಜಾತಿ-ಧರ್ಮವನ್ನು ಮೀರಿ ಯುವಕನನ್ನು ಬದುಕಿಸುವಲ್ಲಿ ಮಾನವೀಯ ಕಾರ್ಯ ಮಾಡಿ ತಂಡಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗೂಡಿನ ಬಳಿ ಯುವಕರ ತಂಡ ಈ ಹಿಂದೆಯೂ ಹಲವರ ರಕ್ಷಣೆ ಮಾಡಿದೆ. ಮಳೆಗಾಲದಲ್ಲಿ ನೆರೆ ಬಂದಾಗ ಈ ತಂಡ ಸಕ್ರಿಯವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತದೆ.