ನವದೆಹಲಿ: ಹೆಲಿಕಾಪ್ಟರ್‌ನಿಂದ ದುಡ್ಡು ಸುರಿಯುತ್ತಾರಾ ಮೋದಿ ಎಂಬ ಸುಳ್ಳು ಸುದ್ದಿ ಪ್ರಕಟಿಸಿದ ಕನ್ನಡದ ಪಬ್ಲಿಕ್‌ಟಿವಿಗೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರೆಸ್ ಇನ್ಫರ್‌ಮೇಶನ್ ಬ್ಯೂರೋ ನೋಟಿಸ್ ನೀಡಿದೆ.
ಈ ಕುರಿತು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್‌ರವರಿಗೆ ಅಡಿಷನಲ್ ಡೈರೆಕ್ಟರ್ ಜನರಲ್ ಎಂ.ನಾಗೇಂದ್ರ ಸ್ವಾಮಿಯವರು ನೋಟಿಸ್ ನೀಡಿದ್ದು ಏಕೆ ನಿಮ್ಮ ಚಾನೆಲ್ ಪ್ರಸಾರವನ್ನು ಕೂಡಲೇ ನಿಲ್ಲಿಸಬಾರದು ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 15ರ ಬುಧವಾರ ರಾತ್ರಿ 8:30ರ ಸಮಯದಲ್ಲಿ ಪಬ್ಲಿಕ್ ಟಿವಿಯಲ್ಲಿ “ಕೊರೊನಾ ಎಫೆಕ್ಟ್: ಹೆಲಿಕ್ಯಾಪ್ಟರ್‌ನಲ್ಲಿ ದುಡ್ಡು ಸುರೀತಾರಾ ಮೋದಿ!?, ಜನರಿಗೆ ಬಂಪರ್ ಗಿಫ್ಟ್ ಆಕಾಶದಿಂದ ಬೀಳಲಿದ್ಯಾ ಕಂತೆ ಕಂತೆ ನೋಟು, ಏನಿದು ಹೆಲಿಕ್ಯಾಪ್ಟರ್ ಮೋದಿ ಪ್ಲಾನ್? ಮೋದಿ ಬಳಿ ಸೂಪರ್ ಐಡಿಯಾ!, ಬಡ್ಡಿ ಇಲ್ಲ.. ಸಾಲ ಅಲ್ಲ.. ಹೆಲಿಕಾಪ್ಟರ್‌ನಿಂದ ಪ್ರತಿ ಊರಿಗೂ ದುಡ್ಡು ಎಂಬುದಾಗಿ ಪ್ರಸಾರ ಮಾಡಿತ್ತು.
ಈ ಸುದ್ದಿಯು ಸುಳ್ಳು ಸುದ್ದಿಯಾಗಿದ್ದು, ಜನರನ್ನು ತಪ್ಪು ದಾರಿಗೆಳೆಯಲಿದೆ ಮಾತ್ರವಲ್ಲದೇ ಉದ್ದೇಶಪೂರ್ವಕವಾದ, ಕುಚೇಷ್ಟೆಯ ಮತ್ತು ಸ್ಪಷ್ಟವಾದ ಕೇಬಲ್ ಟೆಲಿವಿಷನ್ ನೆಟ್ವರ್ಕ್ (ನಿಯಂತ್ರಣ) ಕಾಯ್ದೆ ಮತ್ತು ಸಂಕೇತಗಳ ಉಲ್ಲಂಘನೆಯಾಗಿದೆ ಎಂದು ಪ್ರೆಸ್ ಇನ್ಫರ್‌ಮೇಶನ್ ಬ್ಯೂರೋ ನೋಟಿಸ್‌ನಲ್ಲಿ ತಿಳಿಸಿದೆ.
ಇಡೀ ದೇಶ ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ನಿಮ್ಮ ಚಾನೆಲ್ ಜಾಗೃತಿ ಮೂಡಿಸುವುದನ್ನು ಬಿಟ್ಟು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಜನರಲ್ಲಿ ಭೀತಿ ಉಂಟುಮಾಡುತ್ತಿದ್ದು ಸಾಮಾಜಿಕ ಅಶಾಂತಿಗೆ ಕಾರಣವಾಗಿದ್ದೀರಿ ಎಂದು ಪಬ್ಲಿಕ್ ಟಿವಿಗೆ ಪ್ರೆಸ್ ಇನ್ಫರ್‌ಮೇಶನ್ ಬ್ಯೂರೋ ಛೀಮಾರಿ ಹಾಕಿದೆ.
ಕೇಬಲ್ ಟೆಲಿವಿಷನ್ ನೆಟ್ವರ್ಕ್ (ನಿಯಂತ್ರಣ) ಕಾಯ್ದೆ 1995ರ ಹಲವು ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಏಕೆ ನಿಮ್ಮ ಚಾನೆಲ್ ಪ್ರಸಾರವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬಾರದು ಎಂದು ಪಿಐಬಿ ಕೇಳಿದ್ದು ಈ ನೋಟಿಸ್‌ಗೆ 10 ದಿನಗಳ ಒಳಗಾಗಿ ಸ್ಪಷ್ಟೀಕರಣ ನೀಡುವಂತೆ ತಾಕೀತು ಮಾಡಿದೆ.
ಪಬ್ಲಿಕ್ ಟಿವಿಯಲ್ಲಿ ಏಪ್ರಿಲ್ 15ರ ರಾತ್ರಿ ಆ ಹೆಲಿಕಾಪ್ಟರ್‌ನಲ್ಲಿ ಹಣ ಸುರೀತಾರಾ ಮೋದಿ ಎಂಬ ಸುದ್ದಿ ಪ್ರಸಾರವಾದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ನೂರಾರು ಜನರು ಪಬ್ಲಿಕ್ ಟಿವಿ ಮತ್ತು ಅದರ ಮುಖ್ಯಸ್ಥ ಎಚ್.ಆರ್.ರಂಗನಾಥ್‌ಗೆ ಛೀಮಾರಿ ಹಾಕಿದ್ದರು.
ಈ ಹಿಂದೆ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣ ಘೋಷಿಸಿದ ಸಂದರ್ಭದಲ್ಲಿ ಇದೇ ಪಬ್ಲಿಕ್ ಟಿವಿಯು ಮೋದಿಯವರನ್ನು ಹೊಗಳುವ ಭರದಲ್ಲಿ 2000 ರೂ ನೋಟಿನಲ್ಲಿ ನ್ಯಾನೋ ಜಿಪಿಎಸ್ ಚಿಪ್ಪು ಇದೆ ಎಂದು ಸ್ವತಃ ಎಚ್.ಆರ್.ರಂಗನಾಥ್ ಪದೇ ಪದೇ ಹೇಳಿದ್ದರು. ತದನಂತರ ಅದು ಸುಳ್ಳೆಂದು ಸಾಬೀತಾಗಿ ರಂಗನಾಥ್ ಬಹಳ ಲೇವಡಿಗೊಳಗಾಗಿದ್ದನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬಹುದಾಗಿದೆ.