ಹೈದರಾಬಾದ್: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ ಕೊರೋನಾ ಪೀಡಿತ ವ್ಯಕ್ತಿಯಲ್ಲಿ ಮತ್ತೆ ವೈರಸ್ ದೃಢಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮಾರ್ಚ್ 23 ರಂದು ಈ ವ್ಯಕ್ತಿಯಲ್ಲಿ ವೈರಸ್ ಕಾಣಿಸಿಕೊಂಡಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ ವೈರಸ್ ನೆಗೆಟಿವ್ ಬಂದಿತ್ತು. ಆದರೆ, ಇದೀಗ ಎರಡನೇ ಪರೀಕ್ಷೆಯಲ್ಲಿ ವೈರಸ್ ಪಾಸಿಟಿವ್ ಬಂದಿದ್ದು, ಆಸ್ಪತ್ರೆ ಸಿಬ್ಬಂದಿಗಳು ಮತ್ತೆ ವ್ಯಕ್ತಿಯನ್ನು ಆಸ್ಪತ್ರೆಗೆ ಬರುವಂತೆ ತಿಳಿಸಿದ್ದಾರೆ. ಇದೀಗ ಮತ್ತೆ ವ್ಯಕ್ತಿಯನ್ನು ಪರೀಕ್ಷೆಗೊಳಪಡಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುರುವಾರವಷ್ಟೇ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಾಗಿತ್ತು. ಶುಕ್ರವಾರ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತ ವ್ಯಕ್ತಿ ಎಲ್ಲಿಯೂ ಹೋಗಿರಲಿಲ್ಲ. ಇದೀಗ ಆತನೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ನಲ್ಲಿರುವಂತೆ ತಿಳಿಸಲಾಗಿದೆ. ತನಿಖೆ ಮುಂದುವರೆದಿದ್ದು, ಪರೀಕ್ಷಾ ವರದಿಗಳನ್ನು ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.