ಬೆಂಗಳೂರು,ಏ.11:ಕೊರೋನಾ ವೈರಸ್ ಹರಡುವಿಕೆ ಮತ್ತು ಲಾಕ್ ಡೌನ್ ಕುರಿತು ಪ್ರಧಾನಿ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಬಳಿಕ ಏಪ್ರಿಲ್ 30ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಟಿ ನಡೆಸಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಏಪ್ರಿಲ್ 15ರಿಂದ 30ರವರೆಗೆ ಲಾಕ್ ಡೌನ್ ಬೇರೆ ರೀತಿಯಲ್ಲಿ ಇರಲಿದೆ. ಆರ್ಥಿಕ ಚಟುವಟಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಲಾಕ್ ಡೌನ್ ಇರಬೇಕೆಂದು ಪ್ರಧಾನಿ ತಿಳಿಸಿದ್ದಾರೆ. ಇನ್ನೆರಡು ದಿನದಲ್ಲಿ ಕೇಂದ್ರ ಸರ್ಕಾರವೇ ಮಾರ್ಗಸೂಚಿ ನೀಡಲಿದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ಧಾರೆ.
ವಿವಿಧ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸುಮಾರು 4 ಗಂಟೆ ಕಾಲ ವಿಡಿಯೋ ಕಾನ್ಫೆರೆನ್ಸ್ನಲ್ಲಿ ಮಾತನಾಡಿದರು. ಈ ವೇಳೆ, ಕರ್ನಾಟಕ ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಕಟ್ಟುನಿಟ್ಟಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಧಾನಿ ಸಮಾಧಾನ ಪಟ್ಟಿದ್ದಾರೆ.
ಕೃಷಿಕರು ಬೆಳೆದ ಯಾವುದೇ ಉತ್ಪನ್ನಕ್ಕೂ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ರಾಜ್ಯದ ಯಾವುದೇ ಟೋಲ್ನಲ್ಲೂ ರೈತರ ಉತ್ಪನ್ನಗಳನ್ನು ತಡೆಯುವಂತಿಲ್ಲ. ತಡೆದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ರಾಜ್ಯಾದ್ಯಂತ ಜನರು ತಮ್ಮ ನಿತ್ಯದ ವಸ್ತುಗಳ ಖರೀದಿಗೆ ಮನೆಯಿಂದ ಒಬ್ಬರು ಮಾತ್ರ ಹೊರಗೆ ಹೋಗಲು ಅವಕಾಶ ಇರುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇನ್ನು, ಶಾಲಾ ಕಾಲೇಜುಗಳ ಪರಿಸ್ಥಿತಿಗೆ ಕೇಂದ್ರದಿಂದ ಮಾರ್ಗದರ್ಶಿ ಸೂಚಿ ಬಂದ ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಬೇಕು ಎಂದು ರಾಜ್ಯದ ತಜ್ಞರ ಸಮಿತಿ ಅಭಿಪ್ರಾಯಪಟ್ಟಿತ್ತು. ಆದರೆ, ಸೋಂಕು ಕಡಿಮೆಯಾಗದಿರುವುದರಿಂದ ಲಾಕ್ ಡೌನ್ ಮುಂದುವರಿಸಬೇಕೆಂದು ರಾಷ್ಟ್ರಾದ್ಯಂತ ಒಮ್ಮತದ ಅಪೇಕ್ಷೆ ಕೇಳಿಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಲಾಕ್ ಡೌನ್ ಸಡಿಲಗೊಳಿಸಬಾರದು ಎಂದು ಸಲಹೆ ನೀಡಿದೆ.
ಏಪ್ರಿಲ್ 14ರ ನಂತರದ ಎರಡು ವಾರಗಳಲ್ಲಿ ಲಾಕ್ ಡೌನ್ ಯಾವ ರೀತಿ ಇರಬಹುದು ಎಂದು ಕೇಂದ್ರ ಸರ್ಕಾರ ಇನ್ನೆರಡು ದಿನದಲ್ಲಿ ಮಾರ್ಗದರ್ಶಿ ಸೂಚಿ ಬಿಡುಗಡೆ ಮಾಡಲಿದೆ.
ಮೂಲಗಳ ಪ್ರಕಾರ ಲಾಕ್ ಡೌನ್ ತೆರವಾದ ಬಳಿಕ ಸರ್ಕಾರವೂ ಒಂದಷ್ಟು ತಯಾರಿ ಮಾಡಿಕೊಂಡಿದ್ದು, ಮೇ 5 ರಂದು ಧಾರ್ಮಿಕ ಪ್ರದೇಶಗಳು ತೆರೆಯಲು ಹಾಗೂ ಮೇ 7 ರ ರಂದು ಹಣ್ಣು ಮತ್ತು ತರಕಾರಿ ಮಾರ್ಕೆಟ್ ಗಳು ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಣೆ ಮಾಡವಂತೆ ಯೋಜನೆ ಹಾಕಿಕೊಂಡಿದೆ.
ಮೇ.15 ರ ಬಳಿಕ ರೈಲು, ದೇಶಿ ವಿಮಾನಗಳು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಮೇ ತಿಂಗಳ ಮೂರನೇ ವಾರದ ಬಳಿಕ ಸಿನಿಮಾ ಹಾಲ್, ಮಾಲ್ ಗಳು ಕಾರ್ಯಚರಿಸಲಿದೆ. ಮೇ ಅಂತ್ಯಕ್ಕೆ ಶೈಕ್ಷಣಿಕ ಸಂಸ್ಥೆಗಳು ಪುನಾರಂಭಗೊಳ್ಳಲಿವೆ.
ಇನ್ನು ಅಂತಾರಾಷ್ಟ್ರೀಯ ವಿಮಾನಗಳನ್ನು ಜುಲೈ.30 ರಿಂದ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಇವೆಲ್ಲವನ್ನೂ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.