ತಿರುವನಂತಪುರಂ, ಎ.1: ಕೊರೋನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಲಪಾಡಿಯಲ್ಲಿ ಕರ್ನಾಟಕ ವಿಧಿಸಿರುವ ದಿಗ್ಬಂಧನವನ್ನು ತೆಗೆದುಹಾಕಬೇಕೆಂದು ಕೇರಳ ಹೈಕೋರ್ಟ್ ಬುಧವಾರ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.
ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕ ಸರಕಾರ ಸ್ಥಾಪಿಸಿರುವ ತಡೆಬೇಲಿಗಳನ್ನು ಯಾವುದೇ ವಿಳಂಬವಿಲ್ಲದೆ ತೆರವುಗೊಳಿಸಬೇಕು ಹಾಗೂ ಆ ಮೂಲಕ ಎರಡೂ ರಾಜ್ಯಗಳ ಗಡಿಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ವ್ಯಕ್ತಿಗಳನ್ನು ಕರೆದೊಯ್ಯುವ ವಾಹನಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುತ್ತೇವೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಆರೋಗ್ಯ ಸೇವೆಗಳನ್ನು ಪಡೆಯುವುದಕ್ಕೆ ಅವಕಾಶವನ್ನು ನಿರಾಕರಿಸುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯೆಂದು ಅದು ಹೇಳಿದೆ. ಈ ವಿಚಾರವಾಗಿ ಕೇಂದ್ರ ಸರಕಾರವು ತ್ವರಿತವಾಗಿ ಕಾರ್ಯ ಪ್ರವೃತ್ತವಾಗುವುದೆಂಬುದನ್ನು ತಾನು ನಿರೀಕ್ಷಿಸುವುದಾಗಿಯೂ ನ್ಯಾಯಾಲಯ ಹೇಳಿದೆ.
ಆರೋಗ್ಯ ಸೇವೆಗಳ ಪಡೆಯುವುದಕ್ಕೆ ಅವಕಾಶವನ್ನು ನಿರಾ ಕರಿಸುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯೆಂದು ಅದು ಹೇಳಿದೆ ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಗಡಿ ರಸ್ತೆಗಳಲ್ಲಿ ತಡೆಗಳನ್ನು ನಿರ್ಮಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರನ್ ನಂಬಿಯಾರ್ ಹಾಗೂ ಶಾಜಿ ಪಿ. ಚಾಲಿ ನೇತೃತ್ವದ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿದೆ.
ಕರ್ನಾಟಕ ವಿಧಿಸಿರುವ ದಿಗ್ಬಂಧನದ ಕಾರಣ ಕಾಸರಗೋಡು ಜಿಲ್ಲೆಯಿಂದ ಮಂಗಳೂರಿಗೆ ತುರ್ತು ಚಿಕಿತ್ಸೆಗಾಗಿ ಆಗಮಿಸಿದ ಆಂಬುಲೆನ್ಸ್ ತಡದ ಪರಿಣಾಮ ಈ ವರೆಗೆ 6 ಮಂದಿ ಮೃತಪಟ್ಟಿದ್ದಾರೆ.