ಕಾಸರಗೋಡು,ಮಾ.31:ರಾಷ್ಟ್ರೀಯ ಹೆದ್ದಾರಿ ತಲಪಾಡಿಯ ಕರ್ನಾಟಕ ಗಡಿಯಲ್ಲಿ ಕೇರಳದ ಆಂಬುಲೆನ್ಸ್ ಗೆ ಪ್ರವೇಶ ನಿಷೇಧಿಸಿದ ಕಾರಣ ಚಿಕಿತ್ಸೆ ಲಭಿಸದೆ ಇಂದು ಮಂಜೇಶ್ವರದ ಶೇಖರ್(49)ಎಂಬವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಗಡಿ ಮುಚ್ಚಿದ ಅಮಾನುಷ ಕೃತ್ಯಕ್ಕೆ ಬಲಿಯಾದವರ ಸಂಖ್ಯೆ ಆರಕ್ಕೆ ಏರಿದೆ.
ಕೊರೋನಾ ಎಂಬ ಮಹಾಮಾರಿಯಿಂದ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಲಾಕ್ ಡೌನ್ ನಡೆಸುತ್ತಿದ್ದು, ಅದು ಅಮಾಯಕರ ಜೀವಕ್ಕೆ ಆಪತ್ತು ತರುವ ರೀತಿಯಲ್ಲಾಗಬಾರದು ಎಂಬುದನ್ನು ಅಧಿಕಾರಿಗಳು ಗಮನಿಸಬೇಕಾಗಿದೆ.
ಕಳೆದ ದಿನ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾದ ಆಂಬುಲೆನ್ಸ್ ನ್ನು ತಲಪಾಡಿಯಲ್ಲಿ ತಡೆದ ಕಾರಣ 90 ವರ್ಷದ ಪಾತುಞ್ಞಿ ಎಂಬವರು ಮರಣ ಹೊಂದಿದ್ರು.
ಲಾಕ್ ಡೌನ್ ಮೊದಲು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದ,ಉಪ್ಪಳ ಗೇಟ್ ನಿವಾಸಿಯಾದ ಅಬ್ದುಲ್ ಸಲಾಮ್ ಎಂಬವರನ್ನು ಕಾಸರಗೋಡು ತಾಲೂಕು ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಕ್ಸಿಜನ್ ಸಿಲಿಂಡರ್ ಅಳವಡಿಸಲಾಗಿರುವ ಆಂಬ್ಯುಲೆನ್ಸ್‌ನಲ್ಲಿ ಮಂಗಳೂರಿಗೆ ಕರೆದೊಯ್ಯಲಾಯಿತು. ತಲಪಾಡಿ ಗಡಿಯಲ್ಲಿ ಕರ್ನಾಟಕ ಪೋಲೀಸರು ತಡೆದಿದ್ದಾರೆ, ಡಿಸೋಜಾ ಎಂಬ ಡಿವೈಎಸ್ಪಿ ಗೂಂಡಾ ಥರ ವರ್ತಿಸಿದ್ದಾರೆಂದು ಆಂಬುಲೆನ್ಸ್ ನಲ್ಲಿದ್ದವರು ಆರೋಪಿಸಿದ್ದಾರೆ.
ಗಡಿ ಮುಚ್ಚಿದ ಪ್ರಕರಣ ಸಂಬಂಧಿಸಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಈ ವರೆಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ, ಏತನ್ಮಧ್ಯೆ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಗಡಿ ಮುಚ್ಚಿದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆ.