ಬೆಂಗಳೂರು,ಮಾ.31: ಕರೊನಾ ಸೋಂಕು ಹಿಮ್ಮೆಟ್ಟಿಸಲು ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ದಾಖಲಾತಿಯನ್ನು ಸರ್ಕಾರದ ಮುಂದಿನ ಆದೇಶದವರೆಗೆ ಮುಂದೂಡುವಂತೆ ಸಾರ್ವಜನಿಕ ಶಿಕ್ಷಣ ಇಲಾಕೆ ಈಗಾಗಲೇ ಸುತ್ತೋಲೆ ಹೊರಡಿಸಿದೆ.
ಆದರೆ, ಕೆಲ ಖಾಸಗಿ ಶಾಲೆಗಳು 2019-20ನೇ ಸಾಲಿನಲ್ಲಿ ತೇರ್ಗಡೆಗೊಂಡು ಅದೇ ಶಾಲೆಯಲ್ಲಿ 2020-21ನೇ ಸಾಲಿನಲ್ಲಿ ಮುಂದಿನ ತರಗತಿಯಲ್ಲಿ ದಾಖಲಾಗುವ ಮಕ್ಕಳ ಪ್ರವೇಶಕ್ಕೆ ಏಪ್ರಿಲ್ ಮೇ ತಿಂಗಳಲ್ಲಿ ಕೊನೆಯ ದಿನಾಂಕವನ್ನು ನಿಗದಿಪಡಿಸಿ ಶುಲ್ಕವನ್ನು ಪಾವತಿಸುವಂತೆ ಪಾಲಕರಿಗೆ ಮೊಬೈಲ್ ಸಂದೇಶ, ಇಮೇಲ್ ಹಾಗೂ ಪತ್ರಮುಖೇನ ಸೂಚನೆ ಒತ್ತಡ ಹೇರುತ್ತಿರುವುದು ಕಂಡುಬಂದಿದೆ.
ರಾಜ್ಯದಲ್ಲಿರುವ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ದಾಖಲಾತಿ ಪ್ರಕ್ರಿಯೆಯನ್ನು ಮುಂದೂಡುವಂತೆ ಈಗಾಗಲೇ ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ. ಜತೆಗೆ, ಪ್ರವೇಶ ಶುಲ್ಕವನ್ನು ಪಾವತಿಸಲು ಒತ್ತಾಯಿಸದಂತೆ ಸ್ಪಷ್ಟಪಡಿಸಲಾಗಿದೆ. ಒಂದು ವೇಳೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ, ಅಂಥ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಸಾಂಕ್ರಾಮಿಕ ರೋಗಗಳ ಅಧಿನಿಯಮ, ಪ್ರಕೃತಿ ವಿಕೋಪ ಅಧಿ ನಿಯಮ ಹಾಗೂ ಭಾರತೀಯ ದಂಡ ಸಂಹಿತೆ ಅನ್ವಯ ಕ್ರಿಮಿನಲ್ ಮೊಕದ್ದಮೆ ಹಾಗೂ ಶಿಕ್ಷಣ ಕಾಯ್ದೆಯನ್ವಯ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿ ಸುತ್ತೋಲೆ ಹೊರಡಿಸಿದೆ.